494 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಯೋಜನೆಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9- ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದ್ದು,ನಗರೋತ್ಥಾನ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ 494 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ನಗರದ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಲು ಅನುಕೂಲವಾಗುವಂತೆ ಬಿದರಹಳ್ಳಿಯಲ್ಲಿ ಡಾಂಬರು ಘಟಕ ಸ್ಥಾಪಿಸಲಾಗುತ್ತಿದೆ. ಹೊರವರ್ತುಲ ರಸ್ತೆಗಳನ್ನು ಸಿಗ್ನಲ್ ಫ್ರೀಗೊಳಿಸುವ ಉದ್ದೇಶದಿಂದ ಡಾ.ಮುತ್ತುರಾಜ್ ವೃತ್ತದ ಕೆಳಸೇತುವೆಯನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.

ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಚಾರ ದಟ್ಟಣೆ, ಘನತ್ಯಾಜ್ಯ ವಿಲೇವಾರಿ, ಕೆರೆ ಸಂರಕ್ಷಣೆ ಬಗ್ಗೆ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಮ್ಯಾನೇಜ್‍ಮೆಂಟ್ ಅಥಾರಿಟಿ ಸ್ಥಾಪಿಸಿ ಸಂಯೋಜಿತ ಸಂಚಾರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ನಗರದ ಅತ್ಯಂತ ಸಂಚಾರಿದಟ್ಟಣೆಯುಳ್ಳ 12 ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಲೇನ್ ಹಾಗೂ ಸೈಕಲ್ ಲೇನ್‍ಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಸ್‍ವೈ ಹೇಳಿದರು. 2021ರ ಡಿಸೆಂಬರ್ ವೇಳೆಗೆ ಮೆಟ್ರೋ 2ನೆ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸಾರಿಗೆ ಹೆಚ್ಚಿಸಿ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಒಟ್ಟಾರೆ ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದ್ದು, ಭವಿಷ್ಯದಲ್ಲಿ ಸುಂದರ ಬೆಂಗಳೂರು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್, ಮೇಯರ್ ಗೌತಮ್‍ಕುಮಾರ್, ಉಪಮೇಯರ್ ಮೋಹನ್‍ರಾಜ್ ಮತ್ತಿತರರು ಹಾಜರಿದ್ದರು.

Facebook Comments