ಸಿಎಂ ನಿವಾಸಕ್ಕೆ ಬಿಗಿ ಭದ್ರತೆ ಹೆಚ್ಚಳ , ಕಾರಣವೇನು ಗೊತ್ತೇ…?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.16- ಉಪ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮುಖಂಡರ ಬೆಂಬಲಿಗರು ಗಲಭೆ ನಡೆಸಬಹುದೆಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಓರ್ವ ಡಿಸಿಪಿ, ಎಸಿಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್, ಕ್ಷಿಪ್ರ ಕಾರ್ಯಪಡೆ, ಕೆಎಸ್‍ಆರ್‍ಪಿ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.

ಮನೆಯ ಸುತ್ತ ಹಾಗೂ ರಸ್ತೆಯಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರಮುಖರನ್ನು ಹೊರತುಪಡಿಸಿ ಯಾರೊಬ್ಬರನ್ನೂ ಒಳಗೆ ಬಿಡದಂತೆ ನಿರ್ಬಂಧ ಹಾಕಲಾಗಿದೆ. ಸಚಿವರು, ಶಾಸಕರು, ಪಕ್ಷದ ಪ್ರಮುಖರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಿವಾಸಕ್ಕೆ ಬರುವವರನ್ನು ಬಿಗಿ ತಪಾಸಣೆಗೊಳಪಡಿಸಿ ಒಳಗೆ ಬಿಡಲಾಗುತ್ತದೆ. ಅನಗತ್ಯವಾಗಿ ಮುಖ್ಯಮಂತ್ರಿ ನಿವಾಸದ ಬಳಿ ತಿರುಗಾಡದಂತೆ ನಿರ್ಬಂಧ ಹಾಕಲಾಗಿದೆ.

ರಾಣೆಬೆನ್ನೂರಿನಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಚಿವ ಆರ್.ಶಂಕರ್ ಬೆಂಬಲಿಗರು ನಿವಾಸದ ಮುಂದೆ ದಾಂಧಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇನ್ನು ಕೆಲವರಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವುದು ಇಲ್ಲವೇ ಘೇರಾವ್ ಹಾಕುವ ಸಾಧ್ಯತೆ ಇರುವುದರಿಂದ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.

ನಾಮಪತ್ರ ಸಲ್ಲಿಕೆಯಾಗುವವರೆಗೂ ಬಿಎಸ್‍ವೈ ನಿವಾಸಕ್ಕೆ ಹೆಚ್ಚಿನ ಭದ್ರತೆ ಅಗತ್ಯವಿರುವುದರಿಂದ ದಿನದ 24 ಗಂಟೆಯೂ ಪೊಲೀಸರು ಹದ್ದಿನ ಕಣ್ಣಿಟ್ಟು ಕರ್ತವ್ಯ ನಿರ್ವಹಿಸುವಂತೆ ಗುಪ್ತಚರ ವಿಭಾಗದ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

Facebook Comments