ರಾಜ್ಯದಲ್ಲಿ ಹೂಡಿಕೆಗೆ ಉದ್ಯಮಿಗಳಿಗೆ ಸಿಎಂ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಕೇಂದ್ರ ಸರ್ಕಾರ ಪ್ರಾದೇಶಿಕ ಸಹಕಾರ ಆರ್ಥಿಕ ಒಡಂಬಡಿಕೆ ಸಹಭಾಗಿತ್ವ(ಆರ್‍ಸಿಇಪಿ)ಕ್ಕೆ ಸಹಿ ಹಾಕದ ಹಿನ್ನೆಲೆಯಲ್ಲಿ ಉದ್ದಿಮೆದಾರರು ಮತ್ತು ಬಂಡವಾಳಸ್ಥರು ರಾಜ್ಯದಲ್ಲಿ ಹೂಡಿಕೆ ಮಾಡಿದರೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ಕೊಟ್ಟಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಿನ್ನೆಯಿಂದ ಆರಂಭವಾದ 2019ರ ಬೆಂಗಳೂರು ಟೆಕ್ ಸಮಿಟ್ ಶೃಂಗಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿರುವ ರೈತರು, ಕಾರ್ಮಿಕರು ಮಧ್ಯಮ ವರ್ಗದವರು, ಉದ್ಯಮಿಗಳು ಸೇರಿದಂತೆ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅವರು ಆರ್‍ಸಿಇಪಿ ಒಪ್ಪಂದದಿಂದ ಹಿಂದೆ ಸರಿದರು. ಇದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರುತ್ತದೆ ಎಂದು ಹೇಳಿದರು.  ಆರ್‍ಇಸಿಪಿ ಒಪ್ಪಂದಕ್ಕೆ ಸಹಿ ಹಾಕದಹಿನ್ನೆಲೆಯಲ್ಲಿ ಉದ್ದಿಮೆದಾರರಾಗಲಿ, ಇಲ್ಲವೇ ಬಂಡವಾಳಸ್ಥರು ಆತಂಕಪಡುವ ಅಗತ್ಯವಿಲ್ಲ.

ಕರ್ನಾಟಕದಲ್ಲಿ ನೀವು ಬಂಡವಾಳ ಹೂಡಿಕೆ ಮಾಡಿದರೆ ಸರ್ಕಾರ ಅಗತ್ಯವಿರುವ ಭೂಮಿ, ವಿದ್ಯುತ್, ನೀರು ಸೇರಿದಂತೆ ಎಲ್ಲ ಸೌಕರ್ಯಗಳನ್ನು ನೀಡಲಿದೆ. ಉದ್ದಿಮೆದಾರರಿಗೆ ಕರ್ನಾಟಕ ಯಾವಾಗಲೂ ರತ್ನಗಂಬಳಿ ಹಾಕುತ್ತದೆ ಎಂದು ಆಶ್ವಾಸನೆ ಕೊಟ್ಟರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಟಾರ್ಟ್ ಅಪ್ ಯೋಜನೆಯಲ್ಲಿ ಬೆಂಗಳೂರು ಇಂದು 10ನೇ ಸ್ಥಾನದಲ್ಲಿದೆ. ಇಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ವಿಶ್ವದ ಮುಂಚೂಣಿಯಲ್ಲಿರುವ ಐಟಿಬಿಟಿ ಕಂಪನಿಗಳು ತಳವೂರಿವೆ. ರಾಜ್ಯ ಸರ್ಕಾರವು ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಬೆಂಗಳೂರು ಈಗಲೂ ದೇಶದ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಪಡೆದಿರುವ ಜೊತೆಗೆ ಭಾರತದ ಆವಿಷ್ಕಾರದ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರಾಜ್ಯ ಸರ್ಕಾರವು ಕರ್ನಾಟಕ ತಂತ್ರಜ್ಞಾನ ಅಭಿವೃದ್ದಿ ಮಂಡಳಿಯನ್ನು ರಚಿಸುವ ಮೂಲಕ ಐಟಿಬಿಟಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ ಎಂದರು.  ಉತ್ತಮವಾದ ಕೈಗಾರಿಕಾ ನೀತಿ, ಪರಿಪೂರ್ಣ ತಂತ್ರಜ್ಞಾನ, ನುರಿತ ತಜ್ಞರು, ಮಾನವಸಂಪನ್ಮೂಲದ ಜೊತೆಗೆ ನೈಸರ್ಗಿಕ ಸಂಪನ್ಮೂಲವೂ ಯಥೇಚ್ಛವಾಗಿ ನಮ್ಮಲ್ಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಬಂಡವಾಳ ಹೂಡಿಕೆಗೆ ಕರ್ನಾಟಕ ಸೂಕ್ತ ತಾಣವೆಂದು ನೀತಿ ಆಯೋಗದಲ್ಲೂ ಉಲ್ಲೇಖವಾಗಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಹಲವಾರು ಬಾರಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿ, ಸರ್ಕಾರದಿಂದ ಎಲ್ಲ ನೆರವು ಕೊಡುವ ಆಶ್ವಾಸನೆ ನೀಡಿದ್ದೇನೆ. ಜೊತೆಗೆ ಇತ್ತೀಚೆಗೆ ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ನನ್ನ ಅಧ್ಯಕ್ಷತೆಯಲ್ಲಿ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಇನ್ನಷ್ಟು ತ್ವರಿತವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬಯೋಕಾನ್ ಮುಖ್ಯಸ್ಥರಾದ ಕಿರಣ್ ಮುಜಂದಾರ್, ಮೋಹನ್‍ದಾಸ್ ಪೈ ಮತ್ತಿತರರು ಭಾಗವಹಿಸಿದ್ದರು.

Facebook Comments