ತನ್ವೀರ್ ಸೇಠ್ ಮೇಲೆ ಎಫೆಕ್ಟ್, ಸಿಎಂ ನಿವಾಸಕ್ಕೆ ಭದ್ರತೆ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಶಾಸಕ ತನ್ವೀರ್ ಸೇಠ್ ಮೇಲೆ ಆಗಂತಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸಕ್ಕೆ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಲಾಗಿದೆ.  ಈ ಹಿಂದೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಆರ್.ಶಂಕರ್‍ಗೆ ಟಿಕೆಟ್ ನೀಡದೇ ಇರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸದ ಬಳಿ ದಾಂಧಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಭದ್ರತೆಯನ್ನು ಹೆಚ್ಚಳ ಮಾಡಲಾಗಿತ್ತು.

ಕಳೆದ ಭಾನುವಾರ ರಾತ್ರಿ ದುಷ್ಕರ್ಮಿಯೊಬ್ಬ ತನ್ವೀರ್‍ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಾರಣ ದವಳಗಿರಿ ನಿವಾಸಕ್ಕೆ ಭದ್ರತೆಯನ್ನು ದುಪ್ಪಟ್ಟು ಮಾಡಲಾಗಿದೆ.
ಡಿಸಿಪಿ ನೇತೃತ್ವದಲ್ಲಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದ್ದು, ಎಸಿಪಿ, ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್, ಕೆಎಸ್‍ಆರ್‍ಪಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಹಾಕಲಾಗಿದೆ.

ಮನೆಗೆ ಸಿಎಂ ಭೇಟಿ ಮಾಡಲು ಯಾರೇ ಬಂದರೂ ಬಿಗಿ ತಪಾಸಣೆ ನಡೆಸಿ ಒಳ ಬಿಡುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ಕೊಟ್ಟಿದ್ದಾರೆ. ಟಿಕಟ್ ಸಿಗದವರು ದಾಂಧಲೆ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಪ್ರಮುಖ ರಸ್ತೆ ಬಳಿ ಬ್ಯಾರಿಕೇಡ್ ಹಾಕಲಾಗಿದ್ದು, ಯಾರೇ ಹೋದರೂ ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತಿದೆ.

ಇನ್ನು ಬಿ.ಎಸ್.ಯಡಿಯೂರಪ್ಪ ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಹೋಗುವ ಕ್ಷೇತ್ರಗಳಲ್ಲೂ ಹೆಚ್ಚಿನ ಭದ್ರತೆಕೈಗೊಳ್ಳುವಂತೆ ಗುಪ್ತಚರ ವಿಭಾಗ ಗೃಹ ಇಲಾಖೆಗೆ ನಿರ್ದೇಶನ ನೀಡಿದೆ. ಟಿಕೆಟ್ ವಂಚಿತರು, ಅವರ ಅಭಿಮಾನಿಗಳು, ಕಾರ್ಯಕರ್ತರು ಯಾವುದೇ ರೀತಿಯ ದಾಂಧಲೆ ನಡೆಸಬಹುದೆಂಬ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸೂಚನೆ ಕೊಡಲಾಗಿದೆ.

ಹೀಗಾಗಿ ಯಡಿಯೂರಪ್ಪ ಉಪ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೊರಗೆ ಹೋಗುವ ವೇಳೆ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚನೆ ಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Facebook Comments