ಸಿಎಂಗೆ ರಾಜಕೀಯ ಗುಪ್ತಚರ ಮಾಹಿತಿ ನೀಡದಂತೆ ಚುನಾವಣಾ ಆಯೋಗ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಉಪ ಚುನಾವಣೆ ನಡೆಯುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗುವವರೆಗೂ ಮುಖ್ಯಮಂತ್ರಿಗೆ ಯಾವುದೇ ರೀತಿಯ ಮಾಹಿತಿ ನೀಡದಂತೆ ಗುಪ್ತಚರ ವಿಭಾಗಕ್ಕೆ ರಾಜ್ಯ ಚುನಾವಣಾ ಆಯೋಗ ನಿರ್ಬಂಧ ಹಾಕಿದೆ. ಸಾಮಾನ್ಯವಾಗಿ ಗುಪ್ತಚರ ವಿಭಾಗವು ಮುಖ್ಯಮಂತ್ರಿಗಳ ಅಧೀನದಲ್ಲಿರುತ್ತದೆ. ಪ್ರತಿಪಕ್ಷಗಳ ಇಂಚಿಂಚೂ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ರವಾನೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ.

ಮತಗಳ ಎಣಿಕೆ ನಡೆಯುವ ಡಿ.9ರವರೆಗೆ ಮುಖ್ಯಮಂತ್ರಿಗಳಿಗೆ ಉಪ ಚುನಾವಣೆಯ ಕಾರ್ಯತಂತ್ರಗಳ ಕುರಿತ ಮಾಹಿತಿಯನ್ನು ನೀಡಬಾರದು. ಅಗತ್ಯ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ವಿನಿಮಯ ಮಾಡಿಕೊಳ್ಳಿ ಎಂದು ಆಯೋಗ ಸೂಚನೆ ಕೊಟ್ಟಿದೆ. ಪ್ರತಿ ಪಕ್ಷಗಳು ಯಾವ ಯಾವ ಕಾರ್ಯ ತಂತ್ರಗಳನ್ನು ರೂಪಿಸುತ್ತವೆ ಎಂಬುದರ ಕುರಿತು ಮುಖ್ಯಮಂತ್ರಿಗೆ ಮಾಹಿತಿ ನೀಡಿದರೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಸಾಧ್ಯವಿಲ್ಲ.

ಪ್ರಜಾಪ್ರಭುತ್ವದ ಉದ್ದೇಶವೇ ನಿಶ್ಪಕ್ಷಪಾತವಾಗಿ ಚುನಾವಣೆ ನಡೆಯಬೇಕು. ನೀವು ಪ್ರತಿಪಕ್ಷದವರ ಪ್ರತಿಯೊಂದು ಮಾಹಿತಿ ಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿದರೆ ಮುಕ್ತ ಚುನಾವಣೆ ಸಾಧ್ಯವೇ ಎಂದು ಗುಪ್ತಚರ ವಿಭಾಗದ ಅಧಿಕಾರಿಗಳನ್ನು ಆಯೋಗ ಪ್ರಶ್ನೆ ಮಾಡಿದೆ ಎಂದು ತಿಳಿದು ಬಂದಿದೆ.

ಉಪಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 10ರಿಂದ 12 ಕ್ಷೇತ್ರಗಳನ್ನು ಗೆಲಲ್ಲೇಬೇಕೆಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರಿ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ತಮ್ಮೆಲ್ಲಾ ಶಕ್ತಿ ಸಾಮಥ್ರ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. 15 ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿಗತಿ, ಗೆಲ್ಲುವ ಅಭ್ಯರ್ಥಿಗಳ ಕುರಿತಂತೆ ವರದಿ ನೀಡುವಂತೆ ಗುಪ್ತಚರ ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದರು. ಇದರಂತೆ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುವ ಹಾಗೂ ಗೆಲ್ಲಲು ಶ್ರಮವಹಿಸ ಬೇಕಾಗಿರುವ ಕುರಿತು ಗುಪ್ತಚರ ವಿಭಾಗ ನಿನ್ನೆ ತಡರಾತ್ರಿ ವರದಿ ನೀಡಿತ್ತು.

ಅಲ್ಲದೆ ಪ್ರತಿಪಕ್ಷದವರು ಏನೇನು ಕಾರ್ಯ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಇಂಚಿಂಚೂ ಮಾಹಿತಿ ಮುಖ್ಯಮಂತ್ರಿ ಯವರಿಗೆ ಲಭ್ಯವಾಗಿತ್ತು. ಈ ಬೆಳವಣಿಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರತಿ ಪಕ್ಷಗಳು ದೂರು ಕೊಡಬಹುದೆಂಬ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Facebook Comments