ಬಂಡಾಯ ಶಮನಕ್ಕೆ ಸಿಎಂ ಯಡಿಯೂರಪ್ಪ ತಂತ್ರಗಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆಯ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಬಂಡಾಯ ಶಮನ ಮಾಡಲು ಮುಂದಾಗಿದ್ದಾರೆ. ಬಂಡಾಯದ ಕಾರಣದಿಂದ ಉಪ ಚುನಾವಣೆಯಲ್ಲಿ ಹಿನ್ನಡೆ ಆಗಬಾರದು ಎಂಬುದು ಯಡಿಯೂರಪ್ಪ ಅವರ ಚಿಂತನೆಯಾಗಿದೆ. ಹಾಗಾಗಿ ಬಂಡಾಯ ಉಂಟಾಗಿರುವ ಕ್ಷೇತ್ರದಲ್ಲಿ ಅದನ್ನು ಶಮನಗೊಳಿಸಲು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಿದ್ದಾರೆ.

ಮೂವರು ಉಪ ಮುಖ್ಯಮಂತ್ರಿಗಳು ಹಾಗೂ ಹಿರಿಯ ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಜೆ. ಸಿ. ಮಾಧುಸ್ವಾಮಿ, ವಿ. ಸೋಮಣ್ಣ, ಜಗದೀಶ್ ಶೆಟ್ಟರ್ ಬಂಡಾಯ ಶಮನಗೊಳಿಸುವ ಕಾರ್ಯ ಕೈಗೊಳ್ಳಲಿದ್ದಾರೆ. ನ.21 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಷ್ಟರೊಳಗೆ ಅಭ್ಯರ್ಥಿಗಳ ಮನವೊಲಿಕೆ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಯಾವ-ಯಾವ ಕ್ಷೇತ್ರದಲ್ಲಿ ಬಂಡಾಯ: 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ವಿಜಯನಗರ, ಅಥಣಿ ಮತ್ತು ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಹೊಸಕೋಟೆ ಕ್ಷೇತ್ರದ ಬಗ್ಗೆ ಯಡಿಯೂರಪ್ಪ ಮತ್ತು ಎಂ.ಟಿ.ಬಿ. ನಾಗರಾಜ್ ತಲೆಕೆಡಿಸಿಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬಿಜೆಪಿ ನಾಯಕರ ಮಾತಿಗೆ ಯಾವುದೇ ಬೆಲೆ ಕೊಡುತ್ತಿಲ್ಲ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲಿಲ್ಲ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರಪ್ಪ ದಾಶ್ಯಾಳ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದು, ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ.  ಲಕ್ಷ್ಮಣ ಸವದಿ ಆಪ್ತರಾದ ಗುರಪ್ಪ ಬಂಡಾಯದ ಬಾವುಟ ಹಾರಿಸಿ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದಾರೆ. ಅವರ ಮನವೊಲಿಕೆ ಮಾಡುವ ಜವಾಬ್ದಾರಿಯನ್ನು ಯಡಿಯೂರಪ್ಪ ಲಕ್ಷ್ಮಣ ಸವದಿಗೆ ನೀಡಿದ್ದಾರೆ.

ಹೊಸಕೋಟೆ ಕ್ಷೇತ್ರ: ತಂದೆ ಬಿ.ಎನ್.ಬಚ್ಚೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ, ಎಂ.ಟಿ.ಬಿ.ನಾಗರಾಜ್ ಎಲ್ಲರಿಗೂ ಸಡ್ಡು ಹೊಡೆದು ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶರತ್ ಬಚ್ಚೇಗೌಡ ಕಣದಲ್ಲಿ ಉಳಿದರೆ ಎಂ.ಟಿ.ಬಿ. ನಾಗರಾಜ್ ಗೆಲುವು ಕಷ್ಟವಾಗಲಿದೆ. ಆದ್ದರಿಂದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಅವರಿಗೆ ಶರತ್ ಬಚ್ಚೇಗೌಡ ಮನವೊಲಿಕೆ ಜವಾಬ್ದಾರಿ ನೀಡಲಾಗಿದೆ. ಕೆಲವು ಸ್ವಾಮೀಜಿಗಳ ಮೂಲಕ ಮನವೊಲಿಕೆ ಯತ್ನ ಮಾಡಲಾಗುತ್ತಿದೆ. ಆದರೆ, ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ. 15 ಕ್ಷೇತ್ರಗಳಲ್ಲಿ ಹೊಸಕೋಟೆ ಕ್ಷೇತ್ರದ ಚುನಾವಣೆ ಕುತೂಹಲದ ಕಣವಾಗಿದೆ.

ವಿಜಯನಗರ ಕ್ಷೇತ್ರ: ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರವೂ ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಪಕ್ಷದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕವಿರಾಜ್ ಅರಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಆನಂದ್ ಸಿಂಗ್. ಆರೋಗ್ಯ ಸಚಿವ ಬಿ. ಶ್ರೀರಾಮುಲು ಕವಿರಾಜ್ ಅರಸ್ ಜತೆ ನಡೆಸಿದ ಮಾತುಕತೆ ವಿಫಲವಾಗಿದೆ.
ಕವಿರಾಜ್ ಜತೆ ಮಾತುಕತೆ ನಡೆಸಿ, ಆನಂದ್ ಸಿಂಗ್ ಗೆಲ್ಲಲೇಬೇಕು ಎಂದು ಯಡಿಯೂರಪ್ಪ ಬಳ್ಳಾರಿ ಜಿಲ್ಲಾ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್‍ನಿಂದ ವಿ. ವೈ. ಘೋರ್ಪಡೆ, ಜೆಡಿಎಸ್‍ನಿಂದ ಎನ್.ಎಂ.ನಬಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾರೆ.

Facebook Comments