‘ನಾನು 15 ಸ್ಥಾನಗಳನ್ನೂ ಗೆಲ್ಲೋದು ಪಕ್ಕಾ’ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21- ಯಾರು ಏನೇ ಹೇಳಿದರೂ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವೇ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲೂ ಬಿಜೆಪಿಗೆ ಉತ್ತಮವಾದ ವಾತಾವರಣ ವ್ಯಕ್ತವಾಗುತ್ತಿದೆ. ಸ್ಥಿರ ಸರ್ಕಾರಕ್ಕಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಎಲ್ಲ ಕ್ಷೇತ್ರಗಳನ್ನು ನಾವೇ ಗೆಲ್ಲಲಿದ್ದೇವೆ ಎಂದು ಹೇಳಿದರು.

ಉಪಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ನಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಈಗಾಗಲೇ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಿದ್ದೇವೆ ಎಂದು ತಿಳಿಸಿದರು.  ಯಾರ್ಯಾರು ಎಲ್ಲೆಲ್ಲಿ ಪ್ರಚಾರ ನಡೆಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ನಾನು ದಿನಕ್ಕೆ ಎಲ್ಲೆಲ್ಲಿ ಸಾಧ್ಯವೋ ಅಂತಹ ಕಡೆ ಪ್ರಚಾರ ಮಾಡುತ್ತೇನೆ. ಅಭ್ಯರ್ಥಿಗಳ ಗೆಲುವೇ ನಮ್ಮ ಮುಖ್ಯ ಎಂದರು.

ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇವನಹಳ್ಳಿಗೆ ತೆರಳುತ್ತಿದ್ದೇನೆ. ನಂತರ ಬೆಂಗಳೂರಿಗೆ ಬಂದು ಪಕ್ಷದ ಮುಖಂಡರ ಜೊತೆ ಚುನಾವಣಾ ಕಾರ್ಯತಂತ್ರ ಕುರಿತಂತೆ ಚರ್ಚೆ ಮಾಡುತ್ತೇನೆ. ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

Facebook Comments