ಸಚಿವರು, ಆಪ್ತರ ಜತೆ ಸಿಎಂ ಗಹನ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ಶತಾಯಗತಾಯ ಉಪಸಮರದಲ್ಲಿ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸದಲ್ಲೇ ಕಾರ್ಯತಂತ್ರ ರೂಪಿಸಿದರು.

ಬೆಳಗಾವಿ ಜಿಲ್ಲೆ ಅಥಣಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಬಿಎಸ್‍ವೈ ಇಂದು ಯಾವುದೇ ಕ್ಷೇತ್ರಗಳಿಗೆ ಭೇಟಿ ಕೊಡದೆ ತೆರೆಮರೆಯಲ್ಲೇ ಕುರಿತು ಅಭ್ಯರ್ಥಿಗಳ ಗೆಲುವಿಗೆ ನಾನಾ ತಂತ್ರಗಳನ್ನು ಹೆಣೆದಿದ್ದಾರೆ.

ತಮ್ಮ ಆಪ್ತ ಸಚಿವರು, ಶಾಸಕರಿಂದ 15 ಕ್ಷೇತ್ರಗಳ ಇಂಚಿಂಚು ಮಾಹಿತಿ ಪಡೆದ ಅವರು ಯಾವ ಕ್ಷೇತ್ರದಲ್ಲಿ ಗೆಲುವಾಗಲಿದೆ, ಇನ್ಯಾವ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು ಸೇರಿದಂತೆ ಉಪಚುನಾವಣೆಯ ಗೆಲುವಿಗೆ ವಿಶೇಷವಾದ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದರು. ಕಳೆದ 10 ದಿನಗಳಿಂದ 15 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮಿಂಚಿನ ಪ್ರಚಾರ ನಡೆಸಿದ್ದ ಬಿಎಸ್‍ವೈ ಕನಿಷ್ಠ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

ಕಳೆದ ಮೂರು ದಿನಗಳಿಂದ ಕಾಂಗ್ರೆಸ್-ಜೆಡಿಎಸ್ ಮರು ಮೈತ್ರಿ ಮಾಡಿಕೊಳ್ಳಬಹುದೆಂಬ ವದಂತಿ ಕೇಳಿಬಂದ ಹಿನ್ನೆಲೆಯಲ್ಲಿ ತುಸು ವಿಚಲಿತರಾಗಿರುವ ಮುಖ್ಯಮಂತ್ರಿಯವರು ಫಲಿತಾಂಶದಲ್ಲಿ ಹಿನ್ನಡೆಯಾಗದಂತೆ ಅತ್ಯಂತ ಜಾಗರೂಕತೆ ವಹಿಸಿದ್ದಾರೆ.  ಕೊನೆ ಕ್ಷಣದಲ್ಲಿ ಗೆಲುವಿಗಾಗಿ ರೋಡ್ ಶೋ, ಬೈಕ್ ರ್ಯಾಲಿ, ಮನೆ ಮನೆಗೆ ತೆರಳುವುದು, ಸಂಪನ್ಮೂಲಗಳ ಕ್ರೂಢೀಕರಣ ಸೇರಿದಂತೆ ಹತ್ತು ಹಲವು ಕಾರ್ಯತಂತ್ರಗಳ ಮೂಲಕ ಉಪಸಮರವನ್ನು ಗೆಲ್ಲಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಗುಪ್ತಚರ ವಿಭಾಗ ಹಾಗೂ ಖಾಸಗಿ ಏಜೆನ್ಸಿಗಳ ಮೂಲಕ ಪ್ರತಿ ಕ್ಷೇತ್ರದ ಬಗ್ಗೆ ಇಂಚಿಂಚು ಮಾಹಿತಿಯನ್ನು ಪಡೆಯುತ್ತಿರುವ ಅವರು ಪ್ರತಿ ಅಭ್ಯರ್ಥಿಗಳಿಗೂ ಇಂತಿಂಥ ಕ್ಷೇತ್ರಗಳಲ್ಲೇ ಪ್ರಚಾರ ನಡೆಸಬೇಕೆಂದು ಮಾಹಿತಿ ನೀಡಿದ್ದಾರೆ.  ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ 24 ಗಂಟೆ ಅವಧಿಯೇ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕವಾಗುವುದರಿಂದ ಎಲ್ಲಿಯೂ ಹಿನ್ನಡೆಯಾಗದಂತೆ ಯಡಿಯೂರಪ್ಪನವರೇ ಉಸ್ತುವಾರಿ ವಹಿಸಿದ್ದಾರೆ. ಹೀಗಾಗಿ ಇಂದು ಮನೆಯಲ್ಲೇ ಕುಳಿತು ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯತಂತ್ರವನ್ನು ರೂಪಿಸಿದರು.

Facebook Comments