ದವಳಗಿರಿಯಲ್ಲೇ ಕುಳಿತು 15 ಕ್ಷೇತ್ರಗಳ ಕ್ಷಣ ಕ್ಷಣದ ಮಾಹಿತಿ ಪಡೆದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.5- ತೀವ್ರ ಹಣಾಹಣಿಯಿಂದ ಕೂಡಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲೆ ಕುಳಿತು ಮಾಹಿತಿ ಪಡೆದರು. ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದ ಮುಖ್ಯಮಂತ್ರಿಯವರು ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸದಲ್ಲೇ ಕುಳಿತು 15 ಕ್ಷೇತ್ರಗಳ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದರು.

ಆಪ್ತ ಸಚಿವರು, ಶಾಸಕರು ಹಾಗೂ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಅವರ ನಿವಾಸಕ್ಕೆ ಇಂದು ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಮತದಾನ ಆರಂಭವಾಗುತ್ತಿದ್ದಂತೆ ತಮ್ಮ ಆಪ್ತರು ಹಾಗೂ ಉಸ್ತುವಾರಿಗಳ ಮೂಲಕ ಪ್ರತಿ ಅರ್ಧ ಗಂಟೆಗೊಮ್ಮೆ ಎಷ್ಟೆಷ್ಟು ಪ್ರಮಾಣದಲ್ಲಿ ಮತದಾನವಾಗಿದೆ? ಮತದಾನಕ್ಕೆ ಬಾರದೆ ಇರುವವರನ್ನು ಕರೆತರುವಂತೆಯೂ ಇಲ್ಲಿಂದಲೇ ಸೂಚನೆ ಕೊಡುತ್ತಿದ್ದರು.

ಕೆಲವು ಕಡೆ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದರು. ಇಂತಹ ಕಡೆಯು ಗ್ರಾಮಸ್ಥರನ್ನು ಮನವೊಲಿಕೆ ಮಾಡಿ ಮತಗಟ್ಟೆಗೆ ತರುವಂತೆ ತಮ್ಮ ಪಕ್ಷದ ಮುಖಂಡರಿಗೆ ಸೂಚನೆ ಕೊಟ್ಟರು. ಅಭ್ಯರ್ಥಿಗಳ ಗೆಲುವಿನಲ್ಲಿ ಒಂದೊಂದು ಮತವು ನಿರ್ಣಾಯಕ ವಹಿಸಿರುವುದರಿಂದ ಎಷ್ಟು ಸಾಧ್ಯವೋ? ಅಷ್ಟು ಮತದಾರರನ್ನು ಮತಗಟ್ಟೆಗೆ ಕರೆತರಬೇಕೆಂದು ಮುಖಂಡರಿಗೆ ಒತ್ತಡ ಹಾಕುತ್ತಿದ್ದರು.

ಬೆಳಗ್ಗೆಯೆ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿಯವರು ಸ್ಥಿರ ಮತ್ತು ಸುಭದ್ರ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಟ್ವೀಟ್ ಮಾಡಿದ್ದರು. ನಿನ್ನೆಯೂ ಕೂಡ ಅವರು ಮಳೆ, ಚಳಿ, ಏನೇ ಇರಲಿ ಮತದಾರರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದರು.

15 ಕ್ಷೇತ್ರಗಳಲ್ಲೂ ಬೂತ್ ಮಟ್ಟದಿಂದ ಹೋಬಳಿವರೆಗೂ ಅರ್ಧಗಂಟೆಗೊಮ್ಮೆ ಶೇಕಡಾವಾರು ಮತದಾನದ ಅಂಕಿಅಂಶಗಳನ್ನು ಪಡೆಯುವತ್ತ ತಲೀನರಾಗಿದ್ದರು. ಸಂಜೆ 6 ಗಂಟೆ ಮತದಾನ ಮುಗಿಯುವವರೆಗೂ ಅವರು ಮನೆಬಿಟ್ಟು ಕದಲಿಲ್ಲ.

Facebook Comments