ಉತ್ತಮ ಫಲಿತಂಶ ನಿರೀಕ್ಷೆಯಲ್ಲಿ ಇರುವ ಸಿಎಂಗೆ ‘ಸಂಪುಟ’ ಸಂಕಟ ಶುರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.6- ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತ್ಮವಿಶ್ವಾಸದಲ್ಲಿದ್ದಾರೆ. ಯಡಿಯೂರಪ್ಪನವರ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 6 ಸ್ಥಾನಗಳನ್ನಾದರೂ ಗಳಿಸಬೇಕಿದೆ. ಜೊತೆಗೆ ಗೆದ್ದ ಕ್ಷೇತ್ರದ ಶಾಸಕರಿಗೆ ನೀಡಿರುವ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಬೇಕಿದೆ.

ಇದಲ್ಲದೆ, ಎರಡು ಮೂರು ಎಂಎಲ್ಸಿ ಸ್ಥಾನಗಳನ್ನು ಭರ್ತಿ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡುವ ವಿಶ್ವಾಸ ಹೊಂದಿದ್ದಾರೆ. ಡಿ.9ರಂದು 15 ಕ್ಷೇತ್ರಗಳ 165 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಚುನಾವಣಾಪ್ರಚಾರದ ವೇಳೆ ನೀಡಿದ್ದಾರೆ.

ಆದರೆ, ಸಚಿವ ಸಂಪುಟ ವಿಸ್ತರಣೆ ಮಾಡುವುದಕ್ಕೆ ಹೈಕಮಾಂಡ್ ಅನುಮತಿ, ಸಲಹೆ, ಸೂಚನೆ, ನಿಬಂಧನೆಗಳನ್ನು ಪಾಲಿಸಬೇಕಾಗಿದ್ದು, ಸಚಿವ ಸಂಪುಟಕ್ಕೆ ಅನರ್ಹ ಶಾಸಕರಲ್ಲದೆ ಉಳಿದ ಒಂದಿಬ್ಬರು ಸೇರ್ಪಡೆಗೊಳ್ಳುವ ಸಾಧ್ಯತೆ ಬಗ್ಗೆಯೂ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್‍ರಂಥ ಹಿರಿಯರಿಗೆ ಅವಕಾಶ ಸಿಗಬೇಕಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪರೂ ಸೇರಿಸಿದಂತೆ 18 ಸಚಿವರು ಸಂಪುಟದಲ್ಲಿದ್ದಾರೆ. ಕ್ಯಾಬಿನೆಟ್‍ಗೆ ಒಟ್ಟು 34 ಸ್ಥಾನಗಳವರೆಗೆ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೂ ಹಾಲಿ ಎಂಎಲ್ಸಿಗಳ ಸ್ಥಾನಗಳನ್ನು ಖಾಲಿ ಮಾಡಿಸಿಯಾದರೂ ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ ಸಿಕ್ಕಿದೆ.

8 ಬಾರಿ ಶಾಸಕರಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಬಹಳಕಾಲದಿಂದ ಸಂಪುಟ ಸೇರಲು ಕಾದಿದ್ದಾರೆ. ಅನೇಕ ಬಾರಿ ಮಂತ್ರಿ ಸ್ಥಾನ ಬಗ್ಗೆ ಬಹಿರಂಗವಾಗಿ ತಮ್ಮ ಆಸೆ ತೋಡಿಕೊಂಡಿದ್ದಾರೆ. ಕತ್ತಿಗೆ ಈ ಬಾರಿ ಸ್ಥಾನ ಕಲ್ಪಿಸದಿದ್ದರೆ ಬಂಡಾಯ ಏಳುವ ಭೀತಿ ಇರುವುದರಿಂದ ಕತ್ತಿಗೆ ಉತ್ತಮ ಸ್ಥಾನ ಸಿಗುವುದು ಖಾತ್ರಿಯಾಗಿದೆ.

ಜೊತೆಗೆ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಜೊತೆಗೆ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಇನ್ನೂ ಉಪ ಚುನಾವಣೆ ಬಾಕಿಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯದ ಓಲೈಕೆ ಇದಾಗಿದೆ.

ಆದರೆ, ಹಿಂದುಳಿದ ನಾಯಕರಾಗಿರುವ, ಡಿಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ ಹಾಗೂ ಬಿ ಶ್ರೀರಾಮುಲುಗೆ ನಿರಾಶೆಯಾಗಿದೆ. ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಬಡ್ತಿ ಸಿಕ್ಕಿದ್ದು ಗೃಹ ಸಚಿವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಿಂದಲೂ ಮುಂದಿನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಅತೃಪ್ತರಾಗಿ ಅನರ್ಹರಾಗಿ ಬಿಜೆಪಿ ಸೇರಿದ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕೌಶಲ್ಯಾಭಿವೃದ್ಧಿ, ಕಾರ್ಮಿಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ.

Facebook Comments