ಒಂದೆರಡು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ : ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10-ಒಂದೆರಡು ದಿನದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ 117ನೆ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸಿಎಂ ಮಾತನಾಡಿದರು.

ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಎಲ್ಲ ಶಾಸಕರನ್ನು ಮಂತ್ರಿ ಮಾಡಲಾಗುವುದು. ಈಗಾಗಲೇ ನೀಡಿದ್ದ ಭರವಸೆಯನ್ನು ಈಡೇರಿಸಲಾಗುವುದು. ಎಲ್ಲರೂ ಮಂತ್ರಿ ಆಗುತ್ತಾರೆ. ಈ ಬಗ್ಗೆ ಸಂದೇಹ ಬೇಡ. ಅವರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ, ಉಪಚುನಾವಣೆಯಲ್ಲಿ ಸೋತಿರುವ ಅನರ್ಹ ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಸ್ಮಾರಕವಾಗಲಿದೆ ನಿಜಲಿಂಗಪ್ಪ ಮನೆ: ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಮನೆಯನ್ನು ಸರ್ಕಾರ ಖರೀದಿಸಿ ಸ್ಮಾರಕ ಮಾಡಲಿದೆ ಎಂದು ಸಿಎಂ ಹೇಳಿದರು. ಸ್ಮಾರಕದ ಜವಾಬ್ದಾರಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ ಎಂದರು. ನಿಜಲಿಂಗಪ್ಪ ಅವರು ರಾಜ್ಯಕ್ಕೆ ಒಟ್ಟು ಕೊಡುಗೆ ಅವಿಸ್ಮರಣೀಯವಾದುದು. ಅವರ ಆದರ್ಶ ಗುಣಗಳನ್ನು ನಾವು ಪಾಲಿಸಬೇಕಿದೆ ಎಂದು ಯಡಿಯೂರಪ್ಪ ತಿಳಿಸಿದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನ್ಯಾಯಮೂರ್ತಿ ಶಿವರಾಜ್‍ಪಾಟೀಲ್ ಮತ್ತಿತರರು ಹಾಜರಿದ್ದರು.

Facebook Comments