ಮುಂಬರುವ ಬಜೆಟ್ ನಲ್ಲಿ ಪಶುಸಂಗೋಪನೆಗೆ ಹೆಚ್ಚಿನ ಅನುದಾನ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.12- ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ನಗರದ ಹೆಬ್ಬಾಳದಲ್ಲಿ ನೂತನವಾಗಿ ನಿರ್ಮಿಸಿರುವ ಪಶುಪಾಲನಾ ಭವನ ಮತ್ತು ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಪಶುಪಾಲನೆ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಬದ್ಧವಾಗಿದೆ.

ರಾಜ್ಯದ ಸುಮಾರು 8.46 ಲಕ್ಷ ಹಾಲು ಉತ್ಪಾದನೆಗೆ ಸುಮಾರು 255 ಕೋಟಿ ಪ್ರೋತ್ಸಾಹ ಧನ ವಿತರಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮ, ಗೋಶಾಲೆಗಳಿಗೆ ನೆರವು, ಪಶುಭಾಗ್ಯ ಯೋಜನೆ, ಕ್ಷೀರಧಾರೆ ಯೋಜನೆ, ಜಾನುವಾರ ವಿಮೆ ಸೇರಿದಂತೆ ಹಲವು ಸೌಲಭ್ಯಗಳು ರೈತರಿಗೆ ಅನುಕೂಲವಾಗಿವೆ.

ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಪಶುಪಾಲನಾ ಭವನ ಸಮರ್ಪಕವಾಗಿ ಬಳಕೆಯಾಗಲಿ. ಗ್ರಾಮೀಣ ಭಾಗದ ಜನರ ಆರ್ಥಿಕಾಭಿವೃದ್ಧಿಯಲ್ಲಿ ಪಶುಸಂಗೋಪನೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದರು. ರೈತರು ಕೃಷಿಯನ್ನಷ್ಟೇ ಅವಲಂಬಿತರಾಗದೆ ಕೃಷಿಯೇತರ ಚಟುವಟಿಕೆಗಳು ಹಾಗೂ ಉಪಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತಿದ್ದಾರೆ ಎಂದು ಹೇಳಿದರು.

ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಮಾತನಾಡಿ, ಇಲಾಖೆಯಲ್ಲಿ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ಸಕಾಲದಲ್ಲಿ ತಲುಪುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಇದೇ ಸಂದಭದಲ್ಲಿ ಸಂಕಷ್ಟದಲ್ಲಿರುವ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಧನ ಯೋಜನೆಯಡಿ 25 ಲಕ್ಷ ವಿತರಿಸಲಾಯಿತು. ಅನುಗ್ರಹ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಕುರಿ ಮತ್ತು ಮೇಕೆಗಳ 5 ಮಂದಿ ಸಾಕಾಣಿಕೆದಾರರಿಗೆ 15.80 ಲಕ್ಷ ರೂ. ವಿತರಿಸಲಾಯಿತು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಗೋಪಾಲಯ್ಯ, ವಿಶ್ವನಾಥ್, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ಎಸ್.ಆರ್.ನಟೇಶ್, ನಿರ್ದೇಶಕ ಎಂ.ಟಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Facebook Comments