ಚಿತ್ರ ಸಂತೆಗೆ 1 ಕೋಟಿ ರೂ. ಅನುದಾನ : ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5- ಇನ್ನು ಮುಂದೆ ಚಿತ್ರ ಸಂತೆಗೆ ಪ್ರತಿವರ್ಷ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಚಿತ್ರಕಲಾ ಪರಿಷತ್ ವತಿಯಿಂದ ಇಂದು ಹಮ್ಮಿಕೊಂಡಿರುವ ಚಿತ್ರಸಂತೆಗೆ ಪೋಟ್ರೆಟ್‍ವೊಂದಕ್ಕೆ ಸಹಿ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಚಿತ್ರಸಂತೆಯು ದೇಶ-ವಿದೇಶಗಳಿಂದ ಬರುವ ಕಲಾವಿದರನ್ನು ಆಕರ್ಷಿಸುತ್ತಿರುವುದು ಸ್ವಾಗತಾರ್ಹ. ಹೀಗಾಗಿ ಚಿತ್ರಸಂತೆಯನ್ನು ಉತ್ತೇಜಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಂದಿನ ಬಜೆಟ್‍ನಲ್ಲಿ ಒಂದು ಕೋಟಿ ಅನುದಾನ ಮೀಸಲಿಡಲಾಗುವುದು. ಸರ್ಕಾರ ನಿಮ್ಮೊಂದಿಗೆ ಇದ್ದು ಸಹಕಾರ ನೀಡಲಿದೆ ಎಂದು ಹೇಳಿದರು.

ರಸ್ತೆ ಉದ್ದಗಲಕ್ಕೂ ಕಲಾಕೃತಿಗಳನ್ನು ಇಟ್ಟಿದ್ದು, ಇವುಗಳನ್ನು ನೋಡಲು ಒಂದು ದಿನ ಸಾಕಾಗುವುದಿಲ್ಲ. ಬರೀ ಚಿತ್ರಸಂತೆಯನ್ನು ವೀಕ್ಷಿಸದೆ ಕಲಾಕೃತಿಗಳನ್ನು ಕೊಂಡು ಉತ್ತೇಜಿಸಿದರೆ ಕಲಾವಿದರು ಇಲ್ಲಿ ಬಂದುದು ಸಾರ್ಥಕವಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು.ಈ ಬಾರಿ ಚಿತ್ರಸಂತೆಯನ್ನು ಚಿತ್ರಕಲಾ ಪರಿಷತ್ ರೈತರಿಗೆ ಸಮರ್ಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಜೀವನ ಶೈಲಿಯನ್ನು ಕಲಾವಿದರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇದು ದೇಶದಲ್ಲಿಯೇ ಅಪರೂಪದ ದೊಡ್ಡ ಚಿತ್ರಸಂತೆಯಾಗಿದೆ. ಇದನ್ನು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಹೆಚ್ಚು ಒತ್ತು ನೀಡಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರಸಂತೆ ಉದ್ಘಾಟನೆಗೂ ಮುನ್ನ ಚಿತ್ರಕಲಾ ಪರಿಷತ್ ವಿದ್ಯಾರ್ಥಿಗಳು ನೇಗಿಲು ಹಿಡಿದು ಹೊಲದೊಳು ಉಳುವಾ ಯೋಗಿಯ ನೋಡಲ್ಲಿ ಎಂಬ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದರು. ಈ ಬಾರಿ ಒಟ್ಟು 1500ಕ್ಕೂ ಹೆಚ್ಚು ಸ್ಟಾಲ್‍ಗಳಿವೆ. 18 ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದಾರೆ.

Facebook Comments