ಜ.11ರಂದು ಸಿಎಂ ಯಡಿಯೂರಪ್ಪ ದೆಹಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.9- ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೆಲವು ನಾಯಕರನ್ನು ಭೇಟಿ ಯಾಗುವ ಸಂಬಂಧ ಇದೇ 11 ಮತ್ತು 12ರಂದು ಸಮಯ ಕೇಳಿಕೊಂಡಿದ್ದೇನೆ. ಸಮಯಾವಕಾಶ ಸಿಕ್ಕರೆ ದೆಹಲಿಗೆ ತೆರಳಿ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಬೆಳವಣಿಗೆ, ಹಣಕಾಸು ಸಚಿವರ ಭೇಟಿ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭೇಟಿಗೆ ಸಮಯ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆವು. ಆದರೆ, ಈವರೆಗೂ ಸಮಯ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಪುಟ ವಿಸ್ತರಣೆಗೆ ಜ.11ರಂದು ದೆಹಲಿಗೆ ತೆರಳುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಸಮಯ ನಿಗದಿಯಾದರೆ ತೆರಳುತ್ತೇನೆ. ಹಣಕಾಸು ಸಚಿವರನ್ನು ಭೇಟಿಯಾಗುವುದಾಗಿ ತಿಳಿಸಿದರು. ನೆರೆ ಹಾವಳಿಯಿಂದ ಉಂಟಾದ ರಾಜ್ಯಕ್ಕೆ ಕೇಂದ್ರ ಸರ್ಕಾರ 669ಕೋಟಿ ನೆರೆ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ ಮೊದಲು 1200 ಕೋಟಿ ಬಿಡುಗಡೆ ಮಾಡಿದ್ದ ಮೊತ್ತಕ್ಕೆ ಹೆಚ್ಚುವರಿಯಾಗಿ ಬಿಡುಗಡೆಯಾಗಿರುವ ಹಣ ಎಂದು ಸಿಎಂ ಸ್ಪಷ್ಟಪಡಿಸಿದರು.

ವೀರಶೈವ ಲಿಂಗಾಯಿತ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಪ್ರಸ್ತಾವನೆಗೆ ಈ ಬಗ್ಗೆ ಎಲ್ಲರ ಜತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಮಹಾರಾಷ್ಟ್ರ ಮಾದರಿ, ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಅಧ್ಯಯನ ನಡೆಸಿ ನಂತರ ಎಲ್ಲರೂ ಒಟ್ಟಾಗಿ ಕೂತು ಒಮ್ಮತದ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಇದೇ 18ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹುಬ್ಬಳಿಗೆ ಆಗಮಿಸಲಿದ್ದು,ಪೌರತ್ವ ಕಾಯ್ದೆ ಕುರಿತ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಮೊದಲು ಅವರನ್ನು ಹುಬ್ಬಳ್ಳಿಗೆ ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ಮಂಗಳೂರು ಭೇಟಿ ರದ್ದಾಗಿದೆ ಎಂಬುದು ಮಾಧ್ಯಮಗಳ ಸೃಷ್ಟಿ. ನಿಮ್ಮ ಊಹೆಗೆ ತಕ್ಕಂತೆ ಕಲ್ಪನೆ ಮಾಡಿಕೊಂಡು ನಾನೇನು ಮಾಡಲಿ ಎಂದು ಪ್ರಶ್ನಿಸಿದರು.

Facebook Comments