ಕೊರೋನಾ ನಿಯಂತ್ರಣಕ್ಕೆ ಒಕ್ಕೊರಲ ಬೆಂಬಲ ಘೋಷಿಸಿದ ಪ್ರತಿಪಕ್ಷಗಗಳಿಗೆ ಸಿಎಂ ಕೃತಜ್ಞತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.29: ರಾಜ್ಯದಲ್ಲಿ ಕೋವೀಡ್-19 ಮಹಾಮಾರಿಗೆ ಕಡಿವಾಣ ಹಾಕಲು ಪ್ರತಿಪಕ್ಷಗಳು ತುಂಬು ಹೃದಯದ ಸಹಕಾರ ನೀಡುವುದಾಗಿ ಒಕ್ಕೊರಲಿನಿಂದ ಪ್ರಕಟಿಸಿ ಸರ್ಕಾರಕ್ಕೆ ತಮ್ಮ ಬೇಷರತ್ ಬೆಂಬಲ ಘೋಷಿಸಿದ ಅಪರೂಪದ ಘಟನೆಗೆ ಇಲ್ಲಿ ಇಂದು ಸರ್ವಪಕ್ಷಗಳ ಮುಖಂಡರ ಸಭೆ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸುಮಾರು ಮೂರು ತಾಸುಗಳ ಕಾಲ ನಡೆದ ಈ ಸಭೆಯಲ್ಲಿ ಹೊರಹೊಮ್ಮಿದ ಉಪಯುಕ್ತ ಸಲಹೆಗಳಿಗೆ ಮುಖ್ಯಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.

ಪ್ರತಿದಿನವೂ ಒಂದಲ್ಲದೊಂದು ಕಾರಣಕ್ಕೆ ಪ್ರಧಾನಿಯವರು ತಮ್ಮ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ತಮಗೆ ದೊರೆತಿದೆ ಎಂದು ಹೇಳಿದ ಮುಖ್ಯಮಂತ್ರಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೈಯುಕ್ತಿಕ ರಕ್ಷಣಾ ಉಪಕರಣಗಳನ್ನು, ಮುಖವಾಡಗಳನ್ನು, ಸ್ಯಾನಿಟೈಜರ್‍ಗಳನ್ನು ಪೂರೈಸುವತ್ತ ಅಗತ್ಯ ಕ್ರ ಕೈಗೊಳ್ಳುವುದಾಗಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಎಲ್ಲಾ ರೀತಿಯ ರಕ್ಷಣಾ ಸಾಧನಾ ಸಲಕರಣೆಗಳನ್ನು ಹಾಗೂ ಪರೀಕ್ಷಾ ಉಪಕರಣಗಳನ್ನು ಒದಗಿಸುವುದಾಗಿ ಸಭೆಗೆ ಭರವಸೆ ನೀಡಿದರು.

ಸಂಚಾರ ನಿರ್ಬಂಧದಿಂದ ರಾಜ್ಯದ ಗಡಿಗಳಲ್ಲಿ  ಸಂಕಷ್ಟಕ್ಕೀಡಾಗಿರುವವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ತವರಿಗೆ ಕರೆತರುವ ವ್ಯವಸ್ಥೆ ಮಾಡುವ, ಅದರಲ್ಲಿ ಸೋಂಕಿತರನ್ನು ಕ್ವಾರೆಂಟೈನ್‍ಗೆ ಕಳುಹಿಸುವ ಆರೋಗ್ಯವಂತರನ್ನು ಅವರ ಊರುಗಳಿಗೆ ಕಳುಹಿಸುವ ಮತ್ತೊಂದು ಭರವಸೆ ನೀಡಿದ ಬಿ ಎಸ್ ಯಡಿಯೂರಪ್ಪ ಅವರು ಕೃಷಿ ಉತ್ಪನ್ನಗಳ ಸಾಗಣೆ, ಮಾರಾಟ ಮತ್ತು ಬಳಕೆದಾರರಿಗೆ ವಿತರಣೆಗೂ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹಾಗೂ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಒದಗಿಸಿಕೊಡಲು ಕ್ರಮವಹಿಸುವುದಾಗಿ ನುಡಿದರು.

ಮನೆಯಲ್ಲಿಯೇ ನಮಾಜ್ ಮಾಡಲು ಒಪ್ಪಿ ಸರ್ಕಾರದೊಂದಿಗೆ ಸಹಕರಿಸಿರುವ ಮುಸಲ್ಮಾನ ಬಾಂಧವರಿಗೆ, ಅದರಲ್ಲೂ ವಿಶೇಷವಾಗಿ ಆ ಸಮುದಾಯದ ಮುಖಂಡಿರಿಗೆ, ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

# ಗಣ್ಯರು ನೀಡಿದ ಸಲಹೆಗಳು :
ರಾಜ್ಯದಲ್ಲೇ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳು ನಿಲ್ಲಬಾರದು. ಕೃಷಿ ಚಟುವಟಿಕೆಗಳು ನಿಂತರೆ, ಕೇವಲ ರೈತರಿಗೆ ಮಾತ್ರ ನಷ್ಟವಲ್ಲ, ನಂತರ, ಆಹಾರ ಧಾನ್ಯಗಳ ಕೊರತೆ ಉಂಟಾಗಿ ಇದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ 6020 ಪಂಚಾಯತ್‍ಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕೃಷಿ ಇಲಾಖೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯ ಓರ್ವ ಪ್ರತಿನಿಧಿಯನ್ನು ನೇಮಕ ಮಾಡಿ, ಆ ಪ್ರದೇಶದ ಜನರ ಆರೋಗ್ಯ ಕಾಯ್ದುಕೊಳ್ಳಲು, ಮಾನಸಿಕ ಸ್ಥೈರ್ಯ ತುಂಬಲು, ಆ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡಲು ಹಾಗೂ ರೈರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಪೂರಕ ವಾತಾವರಣ ನಿರ್ಮಿಸಿ.

ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಸವಾಲುಗಳನ್ನು ಎದುರಿಸಲು ಹಾಗೂ ಕೋವಿಡ್-19 ರ ವಿರುದ್ಧ ಸಮರ ಸಾರಲು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಅಥವಾ ಕೇಂದ್ರ ಸರ್ಕಾರದಲ್ಲಿ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿಪಡೆದಿರುವ ಹಾಗೂ 60 ವರ್ಷ ವಯೋಮಾನದೊಳಗಿನ ವೈದ್ಯರನ್ನು ಮತ್ತು ಖಾಸಗಿ ವೈದ್ಯರನ್ನು ಕೂಡಲೇ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದರು.

ವೈದ್ಯಕೀಯ ತಪಾಸಣೆ ನಡೆಸಿರಾಜ್ಯಕ್ಕೆ ಮರಳಲು ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳು ನಾಡು ಗಡಿಯಲ್ಲಿ ಕಾಯುತ್ತಿರುವ ಕನ್ನಡಿಗರನ್ನು ಕರೆತನ್ನಿ ಅಂತ್ಯೋದಯ ಮತ್ತು ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ನೀಡುವ ಏಳು ಕೆ ಜಿ ಆಹಾರ ಧಾನ್ಯ ಹಾಗೂ ಕೇಂದ್ರ ಸರ್ಕಾರ ಏಪ್ರಿಲ್ ಮಾಹೆಯಲ್ಲಿ ನೀಡಲು ಘೋಷಿಸಿರುವ ಐದು ಕೆ ಜಿ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಬದಲು ಜನ ಸಂದಣ ಯಾಗದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮನೆ-ಮನೆಗೆ ಪಡಿತರ ವಿತರಣೆ ಸಾಧ್ಯವೇ ? ಎಂಬುದನ್ನು ಪರಿಶೀಲಿಸಿ ಎಂದರು.

ಸಾವು-ನೋವು ಇಂತಹ ಸಕಾರಣ ಇದ್ದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸಬಾರದು. ಅನಿವಾರ್ಯ ಸಂದರ್ಭದಲ್ಲಿ ಬಲ ಪ್ರಯೋಗ ಮಾಡಬೇಕೇ ಹೊರತು ಪೊಲೀಸರು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ಅಮಾನವೀಯವಾಗಿ ವರ್ತಿಸಬಾರದು ಎಂದು ಪೊಲೀಸರಿಗೆ ಕಿವಿ ಮಾತು ಹೇಳಿದ ಸಿದ್ದರಾಮಯ್ಯ ಅವರುಪ್ರಸ್ತುತದಲ್ಲಿ ನಾವು ಎದುರಿಸುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ. ಆರೋಗ್ಯ ಸಮಸ್ಯೆ ಎಂಬುದನ್ನು ಪೊಲೀಸರು ಮನಗಾಣಬೇಕು ಎಂದು ತಾಕೀತು ಮಾಡಿದರು.

ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರ ಜೊತೆಗೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೂ 50 ಲಕ್ಷ ರೂ ಮೊತ್ತದ ವಿಮೆ ಮಾಡಿಸಲು ಕ್ರಮವಹಿಸುವಂತೆ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತ್ಯೇಕೀಕರಣ ವ್ಯವಸ್ಥೆ ( ಕ್ವಾರಂಟೈನ್ ) ಮತ್ತು ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಮುಂದಾಗುವಂತೆ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ಸರ್ಕಾರದ ನ್ಯೂನ್ಯತೆಗಳನ್ನು ಎತ್ತಿ ತೋರಿಸಲು ತಾವು ಈ ಸಭೆಗೆ ಆಗಮಿಸಿಲ್ಲ ಎಂದೇ ತಮ್ಮ ಮಾತನ್ನು ಆರಂಭಿಸಿದ ಜಾತ್ಯಾತೀತ ಜನತಾದಳದ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಅವರು ಹೊರದೇಶಗಳಿಂದ ಬಂದವರನ್ನು ತಿರುಗಾಡಲು ಬಿಟ್ಟು ನಾವು ಎಡವಿದ್ದೇವೆ. ವಿದೇಶದಿಂದ ಬಂದವರನ್ನು ಆಗಲೇ ಕ್ವಾರೆಂಟೈನ್ ಮಾಡಿದ್ದರೆ, ನಾವು ಇಂತಹ ಸಂದಿಗ್ಧಕ್ಕೆ ಸಿಲುಕುತ್ತಿರಲಿಲ್ಲ ಎಂದು ತಮ್ಮ ಕಳಕಳಿಯ ವ್ಯಕ್ತಪಡಿಸಿದರು.

ಅಲ್ಲದೆ, ಸೋಂಕಿನಿಂದಲ್ಲ. ಜನ ಆತಂಕದಿಂದಲೂ ಸಾಯುವ ಸ್ಥಿತಿ ತಲುಪುತ್ತಾರೆ. ಜನಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಒಂದೆಡೆ ರಾಜ್ಯದಲ್ಲಿ ವೆಂಟಿಲೇಟರ್‍ಗಳ ಕೊರತೆ ಇದೆ. ಮತ್ತೊಂದೆಡೆ ಚೀನಾದಿಂದ ಆಮದಾಗುತ್ತಿರುವ ಪರೀಕ್ಷಾ ಸಾಧನಗಳು ಶೇಕಡಾ 30 ರಷ್ಟು ಪರಿಣಾಮಕಾರಿ ಇಲ್ಲ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಲಭ್ಯವಿರುವ ಕೈಗವಸುಗಳು ಅಥವಾ ಕೆಚ್ಚಿಲುಗಳು ( ಗ್ಲೌಸ್‍ಗಳು ), ನಿಲುವಂಗಿಗಳು ( ಗೌನ್ಸ್ ) ಹಾಗೂ ಮುಖವಾಡಗಳು ( ಮಾಸ್ಕ್ಸ್ ) ಗುಣಮಟ್ಟದ್ದಲ್ಲ ಎಂದು ಹೇಳಲಾಗುತ್ತಿದೆ. ಅವೂ ಕೂಡಾ ಅವಶ್ಯಕತೆಗೆ ಅನುಗುಣವಾಗಿ ಲಭಿಸುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿನ ಹನ್ನೊಂದು ಸೂತ್ರಗಳಂತೆ ಕೋವಿಡ್-19 ನಿಂದ ಸತ್ತ ವ್ಯಕ್ತಿಗಳಿಗೆ ಸಂಸ್ಕಾರ ಮಾಡಲಾಗುತ್ತಿದೆಯೇ ? ಎಂಬುದನ್ನು ಸರ್ಕಾರ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಜನರ ನಿರೀಕ್ಷೆಗಳನ್ನು ತಲುಪಲು ಕೋವಿಡ್-19 ಒಂದು ಸದವಕಾಶ ಎಂದು ಸರ್ಕಾರ ಭಾವಿಸಬೇಕು. ರಸ್ತೆ, ಸೇತುವೆ ಅಥವಾ ಇತರೆ ಯಾವುದೇ ಯೋಜನೆಯಲ್ಲಿನ ಕಾಮಗಾರಿಗಳಿಗೆ ಮೀಸಲಿರುವ ಅನುದಾನವನ್ನು ಬಳಸಿ, ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಪಡಿಸಿ ಅವುಗಳನ್ನು ಅತ್ಯಾಧುನಿಕಗೊಳಿಸಲು ಸರ್ಕಾರ ಮುಂದಾಗಬೇಕು. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚು ಹಣ ಹೂಡಬೇಕು ಎಂದು ಅವರು ಆಗ್ರಹಿಸಿದರು. ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲುಕುಗಳ ಜನತೆಗೆ ಒದಗಿಸಲು ತಾವು ವೈಯುಕ್ತಿಕವಾಗಿ ಹತ್ತು ಸಾವಿರ ಮಾಸ್ಕ್‍ಗಳನ್ನು ಖರೀದಿಸಿ ನೀಡಿರುವುದಾಗಿ ತಿಳಿಸಿದ ಅವರು ಇನ್ನೂ 50,000 ಮಾಸ್ಕ್‍ಗಳ ಖರೀದಿಸಿ ಒದಗಿಸಲು ಮುಂದಾಗಿರುವುದಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಕಟಿಸಿದರು.

ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ತಾವು ಇರುವುದಾಗಿ ಪ್ರಕಟಿಸಿದ ರಾಜ್ಯ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರು ಸೋಂಕು ತಗುಲೀತು ಎಂಬ ಕಾರಣಕ್ಕೆ ರಾಜ್ಯದ ರಾಜಧಾನಿಗೆ ವಲಸೆ ಬಂದಿರುವ ಲಕ್ಷಾಂತರ ಜನಕ್ಕೆ ಇದೀಗ ತಮ್ಮ ಸ್ವಂತ ಊರುಗಳು ನೆನಪಾಗಿದೆ. ಆದರೆ, ಅವರನ್ನು ಊರಿಗೆ ಸೇರಿಸಿಕೊಳ್ಳಲು ಗ್ರಾಮಸ್ಥರೂ ಭಯಪಡುತ್ತಿದ್ದಾರೆ. ಇಂತಹ ತ್ರಿ-ಶಂಕು ಸ್ಥಿತಿಯಲ್ಲಿರುವವರ ನೆರವಿಗೆ ಸರ್ಕಾರ ಮುಂಬರಬೇಕು. ವಲಸಿಗರ ಆರೋಗ್ಯ ತಪಾಸಣೆ ನಡೆಸಿ, ಅವರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.

ಜನಸಂದಣ ಗೆ ಲಾಕ್‍ಡೌನ್‍ನ ಮೂಲ ಉದ್ದೇಶಕ್ಕೇ ಧಕ್ಕೆ ತರುತ್ತಿದೆ. ಆದಕಾರಣ, ಮಾರುಕಟ್ಟೆಗಳಲ್ಲಿ ಜನಸಂದಣ ಗೆ ಅವಕಾಶ ನೀಡಬಾರದು. ಬದಲಾಗಿ ತಳ್ಳುವ ಗಾಡಿಗಳ ಮೂಲಕ ಮನೆಯ ಬಾಗಿಲಿಗೇ ಕಾಯಿಪಲ್ಯೆಗಳ ಜೊತಗೆ ಆಹಾರ ಪದಾರ್ಥಗಳನ್ನೂ ಪೂರೈಸಲು ಯೋಜಿಸಬೇಕು. ಆದರೆ, ಪರಿಸ್ಥಿತಿಯ ದುರ್ಲಾಭ ಪಡೆದು ಅಗತ್ಯ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ತಳ್ಳುವ ಗಾಡಿಯವರ ಮೇಲೂ ಸರ್ಕಾರ ನಿಗಾ ಇರಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ದೂರವಾಣ ಕರೆಮಾಡಿದರೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ, ರಾಜ್ಯದ ರಾಜಧಾನಿಂ ಬೆಂಗಳೂರಿನಲ್ಲೂ ಆನ್‍ಲೈನ್ ಮಾರಾಟಕ್ಕೆ ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಅವರು ಸೂಚಿಸಿದರು.

ಜಾತ್ಯಾತೀತ ಜನತಾ ದಳದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರು ಓರ್ವ ಸಚಿವರು ಅಥವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧಿಕೃತ ಮತ್ತು ನಿಖರ ಮಾಹಿತಿಯನ್ನು ಮಾಧ್ಯಮಗಳಿಗೆ ಕಾಲಕಾಲಕ್ಕೆ ನೀಡುವಂತಾಗಬೇಕು. ಇದರಿಂದ ವದಂತಿಗಳನ್ನು ದೂರಮಾಡಬಹುದು. ಅಲ್ಲದೆ, ಅತಿರಂಜಿತ ವರದಿಗಳಿಗೆ ಕಡಿವಾಣ ಹಾಕಲು ಸಾಧ್ಯ. ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೊರೊನಾ ಸಮಸ್ಯೆ ಉದ್ಭವಿಸಿ ಉಲ್ಬಣ ಸಿದ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣಗಳ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳ ಸಭೆ ಆಯೋಜಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ವಲಸಿಗ ಕಾರ್ಮಿಕರ ಪರಿಸ್ಥಿಯ ಗಂಭೀರತೆಯನ್ನು ಅರಿತು ಕಾನೂನು ಪಾಲನೆಯ ಜೊತೆಗೆ ಅಧಿಕಾರಿಗಳು ಮಾನವೀಯತೆಯ ಸ್ಪರ್ಶವನ್ನೂ ತೋರಬೇಕು ಎಂದು ಬಯಸಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲದ ಹಾಗೂ ಶುಶ್ರೂಷಕರಿಲ್ಲದ ಆಸ್ಪತ್ರೆಗಳಿವೆ. ಬಡವರು ಅವಲಭಿಸಿರುವ ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯಾವಶ್ಯಕವಾದ ಈ ಹುದ್ದೆಗಳನ್ನು ಭರ್ತಿ ಮಾಡಿ ಎಂದ ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರ ಸ್ವಾಮಿ ಅವರು ಕಾಫಿ ಪ್ಲಾಂಟೇಷನ್‍ಗಳಲ್ಲಿ ಕೆಲಸ ಮಾಡುತ್ತಿರುವ ಕಾಫಿ ತೋಟದ ಕಾರ್ಮಿಕರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರ ಅನುವುಮಾಡಿಕೊಡಬೇಕು ಎಂದರು.

ಭಾರತೀಯ ಜನತಾ ಪಕ್ಷದ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ ಲಾಕ್‍ಡೌನ್ ಘೋಷಿಸಿದ್ದರೂ ಸರ್ಕಾರದ ಅಂಕಿ-ಅಂಶಗಳ ಪ್ರಕಾರವೇ ಬೆಂಗಳೂರಿನಲ್ಲಿ ಪ್ರತಿದಿನ 81,000 ಜನರು ಊಟಕ್ಕಾಗಿ ಇಂದಿರಾ ಕ್ಯಾಂಟೀನ್‍ಗಳಿಗೆ ಆಗಮಿಸುತ್ತಿದ್ದಾರೆ. ಊಟದ ಬದಲಾಗಿ ಇವರ ಮನೆಗಳಿಗೆ ದಿನಸಿ ಪದಾರ್ಥಗಳನ್ನು ತಲುಪಿಸಿದಲ್ಲಿ ಅವರು ಮನೆಯಿಂದ ಹೊರಬರುವುದನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.

ಆನ್‍ಲೈನ್ ಷಾಪಿಂಗ್ ಸಂಸ್ಥೆಗಳ ಗುರುತಿನ ಚೀಟಿಯನ್ನು ಮಾನ್ಯ ಮಾಡಿ, ಪ್ರತಿದಿನವೂ ಆ ಹುಡುಗರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದಲ್ಲಿ ಸುಶಿಕ್ಷಿತರು ಮತ್ತು ಸ್ಥಿತಿವಂತರು ಮನೆಯಲ್ಲಿಯೇ ಕುಳಿತು ತಮ್ಮ ದಿನನಿತ್ಯದ ಪದಾರ್ಥಗಳನ್ನು ಪಡೆಯಬಹುದು. ಅದೇ ರೀತಿ, ಮನೆ-ಮನೆಗೆ ದಿನಪತ್ರಿಕೆಗಳನ್ನು ಹಂಚುವ ಹುಡುಗರ ಸೇವೆಯನ್ನು ಬಳಸಿಕೊಂಡು ಹಾಲು, ತರಕಾರಿ ಮತ್ತು ಅತ್ಯಾವಶ್ಯಕ ವಸ್ತುಗಳನ್ನು ವಿತರಿಸುವಬಹುದೇ ? ಅಥವಾ ತಳ್ಳುವ ಗಾಡಿಗಳಿಗೆ ಒಂದು ನಿರ್ದಿಷ್ಟ ಪ್ರದೇಶವನ್ನು ನಿಗದಿಪಡಿಸಿ ಮಾರಾಟಕ್ಕೆ ಅವಕಾಶಕಲ್ಪಿಸಬಹುದೇ ? ಎಂಬ ತಮ್ಮ ಸಲಹೆಯನ್ನೂ ಪರಿಗಣ ಸಲು ಕೋರಿದರು. ಇದರಿಂದ ಜನ ಸಂಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂಬ ತಮ್ಮ ಅನಿಸಿಕೆಯನ್ನು ಹೊರಹಾಕಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವಿತರಿಸಲಾಗುತ್ತಿದ್ದ ಪಿಂಚಣ ಗಳನ್ನು ಖಜಾನೆ-1 ತಂತ್ರಾಂಶದಿಂದ ಖಜಾನೆ-2 ತಂತ್ರಾಂಶಕ್ಕೆ ಪರಿವರ್ತಿಸಿರುವುದರಿಂದ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳಿಗೆ ¨ಪಿಂಚಣ ತಲುಪಿಲ್ಲ ಎಂಬ ಅಂಶವನ್ನು ಸರ್ಕಾರದ ಗಮನಸೆಳೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ಕೆ ಆರ್ ರಮೇಶ್ ಕುಮಾರ್ ಅವರು ಬಡವರಿಗೆ ಸಕಾಲದಲ್ಲಿ ಪಿಂಚಣ ದೊರಕಿಸಿಕೊಡಲು ಹಳೆಯ ಪದ್ಧತಿಯನ್ನು ಮುಂದುವರೆಸುವಂತೆಯೂ ಹಾಗೂ ಪ್ರಸ್ತುತ ನೀಡುತ್ತಿರುವ ಪಿಂಚಣ ಮೊತ್ತವನ್ನು 500 ರೂ ನಿಂದ ಒಂದು ಸಾವಿರ ರೂ ಗಳಿಗೆ ಹೆಚ್ಚಿಸುವಂತೆಯೂ ಮನವಿ ಮಾಡಿದರು.

ಅಲ್ಲದೆ, ಮನೆಗೆ ಬೆಂಕಿ ಬಿದ್ದಾಗ ಗಳ ಹಿಡಿಯುವವರು, ಬೀಡಿ ಹಚ್ಚಿಕೊಳ್ಳುವವರು ನಮ್ಮಲ್ಲಿ ಹೆಚ್ಚಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಪರಿಸ್ಥಿತಿಯ ದುರ್ಲಾಭ ಪಡೆಯುವವರೇ ಹೆಚ್ಚು. ಚಂದಾ ಹಣ ವಸೂಲಿ ಮಾಡಲು ನಕಲಿ ದೇಶಭಕ್ತರು ಹುಟ್ಟಿಕೊಳ್ಳುತ್ತಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಮಾತ್ರ ದೇಣ ಗೆ ನೀಡಬೇಕು. ಬೇರಾರಿಗೂ ಹಣ ನೀಡಬಾರದು. ಈ ವಿಷಯವನ್ನು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ತಮ್ಮ ನಿಲುವನ್ನು ಪ್ರತಿಪಾದಿಸಿದರು.

ಅದೇ ಪಕ್ಷದ ಮತ್ತೋರ್ವ ಮುಖಂಡ ಈಶ್ವರ ಖಂಡ್ರೆ ಅವರು ಸಾಕಷ್ಟು ಪ್ರಮಾಣದಲ್ಲಿ ಪ್ರಯೋಗಾಲಯಗಳಿಲ್ಲದಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋವಿಡ್-19 ಸಂಬಂಧೀ ವೈದ್ಯಕೀಯ ತಪಾಸಣಾ ವರದಿಗಳು ಸ್ವೀಕೃತವಾಗುವುದು ವಿಳಂಬವಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ದಾಸ್ತಾನು ಇರುವ ವೈಯುಕ್ತಿಕ ರಕ್ಷಣಾ ಉಪಕರಣಗಳನ್ನು, ಇತರೆ ಆರೋಗ್ಯ ಸಾಧನಗಳನ್ನು ಹಾಗೂ ವೈದ್ಯಕೀಯ ಪರಿಕರಗಳನ್ನು ಈ ಭಾಗಕ್ಕೆ ಕಳುಹಿಸಿಕೊಡಬೇಕು ಎಂದು ಕಳಕಳಿಯ ಮನವಿ ಮಾಡಿದರು.

ಬಹುಜನ ಸಮಾಜ ಪಕ್ಷ ಮುಖಂಡ ಎನ್ ಮಹೇಶ್ ಅವರು ಮಾತನಾಡಿ ಸರ್ಕಾರವೇ ಮಧ್ಯವೇಶಿಸಿ ಕೃಷಿ ಉತ್ಪನ್ನಗಳನ್ನು, ಅದರಲ್ಲೂ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಲು ತಾಕೀತು ಮಾಡಿದರು.

ಉಪ ಮುಖ್ಯಮಂತ್ರಿಗಳಾದ ಡಾ ಸಿ ಎನ್ ಅಶ್ವಥನಾರಾಯಣ್ ಮತ್ತು ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ರಜನೀಶ್ ಗೋಯಲ್, ಜಾವೇದ್ ಅಖ್ತರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಸ್ ಸೆಲ್ವ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರೂ ಸೇರಿದಂತೆ ಹಲವು ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin