BIG BREAKING : ಮತ್ತೊಂದು ಬಂಪರ್ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 15- ಲಾಕ್‍ಡೌನ್ ಜಾರಿಯಾದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ನಾಡಿನ ಅನ್ನದಾತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂರನೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮೆಕ್ಕೆಜೋಳ ಬೆಳೆದ ಪ್ರತಿ ರೈತನಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನವನ್ನು ಯಡಿಯೂರಪ್ಪ ಪ್ರಕಟಿಸಿದರು.

ವಿಧಾನಸೌಧದಲ್ಲಿ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಲಾಕ್‍ಡೌನ್ ಜಾರಿಯಿಂದಾಗಿ ಮೆಕ್ಕೆಜೋಳ ಬೆಳೆದ ಸುಮಾರು 10 ಲಕ್ಷ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.

ಇದನ್ನು ಅರಿತು ನಮ್ಮ ಸರ್ಕಾರ ಪ್ರತಿಯೊಬ್ಬ ರೈತನಿಗೂ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ಇದಕ್ಕಾಗಿ 500 ಕೋಟಿ ಪ್ಯಾಕೇಜ್ ಮೀಸಲಿಡಲಾಗುವುದು ಎಂದು ಹೇಳಿದರು. ಮೆಕ್ಕೆ ಜೋಳಕ್ಕೆ ಪ್ರತಿ ಕ್ವಿಂಟಾಲ್‍ಗೆ 1,760 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ.

ಶೇ.40ರಿಂದ 50 ರಷ್ಟು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಆದರೂ ಅವರ ಸಂಕಷ್ಟವನ್ನು ಅರಿತು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕೆಜೋಳ ಬೆಳೆದ ಬೆಳೆಗಾರರಿಗೆ ನೆರವು ನೀಡಿರುವುದು ನಮ್ಮ ಸರ್ಕಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್-19 ವಿರುದ್ಧ ಹಗಲು , ರಾತ್ರಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಬಹು ದಿನಗಳ ಬೇಡಿಕೆಯಂತೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ರಾಜ್ಯದಲ್ಲಿ 40,250 ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದೇ ಕಂತಿನಲ್ಲಿ ಸಹಕಾರ ಇಲಾಖೆ ಮೂಲಕ 3 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು . ಇದಕ್ಕಾಗಿ 12.50 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.ನೈಸರ್ಗಿಕ ವಿಕೋಪ ಹಾಗೂ ಅಪಘಾತದಲ್ಲಿ ಕುರಿ, ಮೇಕೆಗಳು ಸಾವನ್ನಪ್ಪಿದರೆ 5 ಸಾವಿರ ರೂ. ನೆರವು ನೀಡುವ ಯೋಜನೆಯನ್ನು ಮುಂದುವರೆಸಲಾಗುವುದು.

ನಾನಾ ಕಾರಣಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಜನರ ಪರಿಸ್ಥಿತಿಯನ್ನು ಅರಿತು ಇದನ್ನು ಮುಂದುವರೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಹೊಸ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.

ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೂ ಎಲ್ಲಾ ಸಮುದಾಯಗಳ ಪರಿಸ್ಥಿತಿ ಅರ್ಥ ಮಾಡಿಕೊಂಡು ಪ್ಯಾಕೇಜ್ ಘೋಷಿಸಿದ್ದೇವೆ. ಮುಂದೆ ಹೊಸ ಪ್ಯಾಕೇಜ್ ಇರುವುದಿಲ್ಲ ಎಂದು ಪುನರುಚ್ಚರಿಸಿದರು.

ಮೇ 17ರ ನಂತರ ಲಾಕ್‍ಡೌನ್ ಇನ್ನಷ್ಟು ಸಡಿಲವಾಗಬಹುದು. ಸಲೂನ್‍ಗಳು, ಮಾಲ್‍ಗಳು, ಪ್ರಾರಂಭವಾಗಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ನನಗಿರುವ ಮಾಹಿತಿ ಪ್ರಕಾರ ನಾಳೆ ಅಥವಾ ನಾಡಿದ್ದು ಹೊಸ ಮಾರ್ಗಸೂಚಿ ಪ್ರಕಟವಾಗಬಹುದು.  ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ನಾವು ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

Facebook Comments

Sri Raghav

Admin