ಸಂಪುಟ ವಿಸ್ತರಣೆ ಕುರಿತು ಇಂದು ಅಮಿತ್ ಷಾ ಜೊತೆ ಸಿಎಂ ಯಡಿಯೂರಪ್ಪ ಮಾತುಕತೆ
ಬೆಂಗಳೂರು, ಆ.11- ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವರೂ ಆದ ಅಮಿತ್ ಶಾ ಅವರ ಜತೆ ಇಂದು ಮಾತುಕತೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ಮಾಡಲು ನಾನು ತೀರ್ಮಾನಿಸಿದ್ದೇನೆ. ಕೇಂದ್ರ ವರಿಷ್ಠರ ಅನುಮತಿಗಾಗಿ ಕಾಯುತ್ತಿದ್ದೇನೆ. ಇಂದು ಅಮಿತ್ ಶಾ ಅವರು ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಈ ವೇಳೆ ಸಂಪುಟ ವಿಸ್ತರಣೆ ಮಾಡಲು ಅನುಮತಿ ಕೇಳುವುದಾಗಿ ಹೇಳಿದರು.
ನಗರದ ಹಲಸೂರು ಸಮೀಪವಿರುವ ತಮಿಳಿನ ಮಹಾಕವಿ ತಿರುವಳ್ಳವರ್ ಪ್ರತಿಮೆ ಸಂಸ್ಥಾಪನೆ ಮಾಡಿ 10ನೇ ವರ್ಷವಾದ ಹಿನ್ನೆಲೆಯಲ್ಲಿ ಇಂದು ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಯಡಿಯೂರಪ್ಪ ಮಾತನಾಡಿದರು.
ರಾಜ್ಯದ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕೈಗೊಳ್ಳಲು ಕೇಂದ್ರದಿಂದ ಅಗತ್ಯ ನೆರವು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರು ಹಾಗೂ ಹಣಕಾಸು ಸಚಿವರಿಗೆ ಪ್ರತ್ಯೇಕವಾದ ಪತ್ರ ಬರೆಯಲಾಗಿದೆ. ಕೇಂದ್ರದಿಂದ ನಮಗೆ ಸೂಕ್ತ ನೆರವು ಸಿಗುವ ವಿಶ್ವಾಸವಿದೆ.
ಶೀಘ್ರದಲ್ಲೇ ಆರ್ಥಿಕ ಸಹಾಯ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಇಂದು ಬೆಳಗಾವಿ, ಬಾಗಲಕೋಟೆ ಸೇರಿದಂತೆ ಮತ್ತಿತರ ಕಡೆ ಅಮಿತ್ ಶಾ ಮತ್ತು ನಾನು ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದೇವೆ.
ಈ ವೇಳೆ ರಾಜ್ಯದ ವಸ್ತು ಸ್ಥಿತಿ ಬಗ್ಗೆ ವಿವರಿಸಲಿದ್ದೇನೆ. ಈಗಾಗಲೇ ಕೇಂದ್ರದ ಹಣಕಾಸು ಸಚಿವರು ಬಂದು ಹೋಗಿರುವುದರಿಂದ ಪ್ರಧಾನಿಯವರಿಗೆ ಇಲ್ಲಿನ ವಸ್ತು ಸ್ಥಿತಿ ಅರ್ಥವಾಗಿದೆ ಎಂದರು.
ನಾನೂ ಕೂಡ ಬೆಳಗಾವಿಗೆ ತೆರಳುತ್ತಿದ್ದೇನೆ. ಕೇಂದ್ರ ಸರ್ಕಾರ ನಮಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ಜನರು ಆತಂಕಕ್ಕೆ ಒಳಗಾಗಬಾರದು. ನಿಮ್ಮೊಂದಿಗೆ ನಮ್ಮ ಸರ್ಕಾರ ಹಾಗೂ ಕರ್ನಾಟಕದ ಎಲ್ಲಾ ಜನರು ಇದ್ದಾರೆ. ನಿಮ್ಮ ನೋವಿನಲ್ಲಿ ನಾನೂ ಕೂಡ ಭಾಗಿಯಾಗುತ್ತೇನೆ ಎಂದು ಬಿಎಸ್ವೈ ಮನವಿ ಮಾಡಿದರು.
ಸಂಕಷ್ಟದಲ್ಲಿರುವ ಜನರ ಜತೆ ಖುದ್ದು ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಕಳಕಳಿ ಹೊಂದಿದ್ದೇನೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಉದಾರವಾಗಿ ದೇಣಿಗೆ ನೀಡುವ ಮೂಲಕ ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಧಾವಿಸಬೇಕೆಂದು ಸಿಎಂ ಕರೆ ಕೊಟ್ಟರು.
ಇದಕ್ಕೂ ಮುನ್ನ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯಡಿಯೂರಪ್ಪ, ತಿರುವಳ್ಳುವರ್ ಮಹಾನ್ ತತ್ವಜ್ಞಾನಿ, ಅವರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಸರಳವಾಗಿ ತಿಳಿಸುವ ಮೂಲಕ ಮಹಾನ್ ಸಂತನಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿದರು.
ಅನೇಕ ಕೃತಿಗಳು ಗ್ರಂಥಗಳು, ದ್ವಿಪದಿಗಳ ಮೂಲಕ ಜೀವನದ ಸೊಗಡನ್ನು ಸರಳವಾಗಿ ಅರ್ಥೈಸಿದ್ದಾರೆ. ಅವರು ಬರೆದ ಅನೇಕ ಕೃತಿಗಳು ವಿಶ್ವದ ಬೇರೆ ಬೇರೆ ಭಾಷೆಗಳಲ್ಲಿ ತರ್ಜುಮೆಯಾಗಿವೆ. ಕನ್ನಡಿಗರು ಮತ್ತು ತಮಿಳರು ಸೌಹಾರ್ದಯುತವಾಗಿ ಜೀವಿಸುತ್ತಿದ್ದಾರೆ.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದೆ. ಇಂದಿಗೆ 10 ವರ್ಷವಾಗಿರುವುದರಿಂದ ಮಾಲಾರ್ಪಣೆ ಮಾಡಿದ್ದೇನೆ.
ಇದು ನನಗೆ ಅತ್ಯಂತ ಸುದೈವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್, ಕಾಂಗ್ರೆಸ್ನಿಂದ ಅನರ್ಹಗೊಂಡಿರುವ ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್ ಮತ್ತಿತರರು ಹಾಜರಿದ್ದರು.