ಇನ್ನೂ ಗುಟ್ಟಾಗಿಯೇ ಖಾತೆ ಹಂಚಿಕೆ ಸೀಕ್ರೆಟ್..! ಯಾರಿಗೆ ಯಾವ ಖಾತೆ..? ಇಂದೇ ಫೈನಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ಸಂಪುಟ ರಚನೆಯಾದ ಬಳಿಕ ಕಗ್ಗಂಟಾಗಿ ಪರಿಣಮಿಸಿದ್ದ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆಯಾಗಲಿದ್ದು, ಕೊನೆ ಕ್ಷಣದವರೆಗೂ ಯಾರಿಗೆ ಯಾವ ಖಾತೆ ಎಂಬುದು ಗುಟ್ಟಾಗಿಯೇ ಉಳಿದಿದೆ.

ಕಳೆದ ರಾತ್ರಿ ದೆಹಲಿಯಿಂದ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲು ವರಿಷ್ಠರಿಂದ ಹಸಿರು ನಿಶಾನೆ ಪಡೆದಿದ್ದಾರೆ. ಮಧ್ಯಾಹ್ನ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡಲಿದ್ದು, ಅವರ ಸಹಿ ಬಿದ್ದ ನಂತರ ಯಾರಿಗೆ ಯಾವ ಖಾತೆ ಎಂಬುದು ಬಹಿರಂಗಗೊಳ್ಳಲಿದೆ.

ಸಚಿವರ ಖಾತೆ ಹಂಚಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರ ವರಿಷ್ಠರು ಪೂರ್ಣ ಸ್ವಾತಂತ್ರ ನೀಡಿದ್ದು, ಅವರವರ ಸಾಮಥ್ರ್ಯ, ಹಿರಿತನ, ಪ್ರದೇಶವಾರು ಆಧಾರದ ಮೇಲೆ ಖಾತೆಗಳನ್ನು ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಖಾತೆ ಹಂಚಿಕೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಆದರೆ, ಎಲ್ಲಿಯೂ ಅಸಮಾಧಾನ, ಅತೃಪ್ತಿಗೆ ಅವಕಾಶವಿಲ್ಲದಂತೆ ಸರಿದೂಗಿಸಿಕೊಂಡು ಹೋಗುವಂತೆ ವರಿಷ್ಟರು ಸಲಹೆ ಮಾಡಿದ್ದಾರೆ.

ಇದೀಗ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ ನೂತನ ಸಚಿವರಿಗೆ ಅನುಭವ ಮತ್ತು ಸಾಮಥ್ರ್ಯಕ್ಕೆ ತಕ್ಕಂತೆ ಹೊಣೆಗಾರಿಕೆಯನ್ನು ನೀಡಲಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನದ ನಂತರ ಅತ್ಯಂತ ಮಹತ್ವದ ಹುದ್ದೆ ಎನಿಸಿರುವ ಗೃಹ ಖಾತೆ ಯಾರಿಗೆ ಸಿಗಲಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ಈ ಖಾತೆಯನ್ನು ಯಾರೊಬ್ಬರೂ ವಹಿಸಿಕೊಳ್ಳುತ್ತೇನೆ ಎಂದು ಮುಂದೆ ಬಂದಿಲ್ಲ. ಹಿರಿಯರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಮತ್ತಿತರರು ಗೃಹ ಖಾತೆ ವಹಿಸಿಕೊಳ್ಳಲು ಸುತಾರಾಮ್ ಸಿದ್ದರಿಲ್ಲ.

ಎಲ್ಲರೂ ಸಂಪದ್ಬರಿತವಾದ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಸಿಎಂಗೆ ಇದು ಕೂಡ ತಲೆನೋವಾಗಿ ಪರಿಣಮಿಸಿದೆ. ಪ್ರಮುಖವಾಗಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಭಾರೀ ನೀರಾವರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಬೆಂಗಳೂರು ನಗರಾಭಿವೃದ್ಧಿ, ಕೃಷಿ ಸೇರಿದಂತೆ ಮತ್ತಿತರ ಖಾತೆಗಳ ಮೇಲೆ ಸಚಿವರು ಕಣ್ಣಿಟ್ಟಿದ್ದಾರೆ.

ಮೂಲಗಳ ಪ್ರಕಾರ ಆರ್.ಅಶೋಕ್ ಬೆಂಗಳೂರು ನಗರಾಭಿವೃದ್ಧಿ ಜತೆಗೆ ಇಂಧನ ಖಾತೆ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಕೆ.ಎಸ್.ಈಶ್ವರಪ್ಪ ಗೃಹ ಖಾತೆ ಬದಲು ಗ್ರಾಮೀಣಾಭಿವೃದ್ಧಿ ಇಲ್ಲವೇ ಇಂಧನ, ಜಗದೀಶ್ ಶೆಟ್ಟರ್ ಕಂದಾಯ ಇಲ್ಲವೇ ಗ್ರಾಮೀಣಾಭಿವೃದ್ಧಿ , ಗೋವಿಂದ ಕಾರಜೋಳ ಲೋಕೋಪಯೋಗಿ, ಸಿ.ಟಿ.ರವಿ ಉನ್ನತ ಶಿಕ್ಷಣ, ಡಾ.ಸಿ.ಎನ್.ಅಶ್ವತ್ಥನಾರಾಯಣ ವೈದ್ಯಕೀಯ ಇಲ್ಲವೇ ಪ್ರಾಥಮಿಕ ಮತ್ತು ಕುಟುಂಬ ಕಲ್ಯಾಣ, ವಿ.ಸೋಮಣ್ಣ ನಗರಾಭಿವೃದ್ಧಿ ಸೇರಿದಂತೆ ಹೀಗೆ ಸಚಿವರು ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಹೈಕಮಾಂಡ್ ಇಂಥವರಿಗೆ ಇಂತಹದ್ದೇ ಖಾತೆ ನೀಡಬೇಕೆಂದು ಬಿಎಸ್‍ವೈಗೆ ಸೂಚನೆ ಕೊಟ್ಟಿಲ್ಲದ ಕಾರಣ ಯಡಿಯೂರಪ್ಪ ಕೂಡ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಖಾತೆಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ. ಯಾರಿಗೂ ಅಸಮಾಧಾನ, ಅತೃಪ್ತಿಗೆ ಅವಕಾಶ ನೀಡದಂತೆ ಎಚ್ಚರಿಕೆಯ ಹೆಜ್ಜೆ ಇಡುವ ತೀರ್ಮಾನ ಕೈಗೊಂಡಿದ್ದಾರೆ.

# ಸಂಭವನೀಯ ಖಾತೆ:
1. ಜಗದೀಶ್ ಶೆಟ್ಟರ್-ಕಂದಾಯ
2. ಗೋವಿಂದ ಕಾರಜೋಳ- ಲೋಕೋಪಯೋಗಿ
3. ಕೆ.ಎಸ್.ಈಶ್ವರಪ್ಪ- ಗೃಹ
4. ಆರ್.ಅಶೋಕ್ – ಇಂಧನ/ ಬೆಂಗಳೂರ ಅಭಿವೃದ್ಧಿ
5. ಜೆ.ಸಿ.ಮಾಧುಸ್ವಾಮಿ- ಕೃಷಿ/ಕಾನೂನು ಮತ್ತು ಸಂಸದೀಯ ವ್ಯವಹಾರ
6. ಎಸ್.ಸುರೇಶ್‍ಕುಮಾರ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
7. ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
8. ಲಕ್ಷ್ಮಣಸವದಿ- ಸಹಕಾರ
9. ಬಸವರಾಜ ಬೊಮ್ಮಾಯಿ- ಬೃಹತ್ ನೀರಾವರಿ
10. ಪ್ರಭುಚೌವ್ಹಾಣ್- ಯುವಜನ ಮತ್ತು ಕ್ರೀಡೆ
11. ಕೋಟ ಶ್ರೀನಿವಾಸಪೂಜಾರಿ – ಬಂಧರು, ಮೀನುಗಾರಿಕೆ ಮತ್ತು ಮುಜರಾಯಿ
12. ಎಚ್.ನಾಗೇಶ್- ಸಣ್ಣ ಕೈಗಾರಿಕೆ
13. ಸಿ.ಸಿ.ಪಾಟೀಲ್- ಕನ್ನಡ ಮತ್ತು ಸಂಸ್ಕøತಿ / ತೋಟಗಾರಿಕೆ
14. ಡಾ.ಸಿ.ಎನ್.ಅಶ್ವತ್ಥನಾರಾಯಣ- ಪ್ರಾಥಮಿಕ ಮತ್ತು ಕುಟುಂಬ ಕಲ್ಯಾಣ
15. ವಿ.ಸೋಮಣ್ಣ- ವಸತಿ/ ನಗರಾಭಿವೃದ್ಧಿ
16. ಸಿ.ಟಿ.ರವಿ- ಉನ್ನತ ಶಿಕ್ಷಣ
17. ಶ್ರೀರಾಮುಲು- ಸಮಾಜ ಕಲ್ಯಾಣ

Facebook Comments

Sri Raghav

Admin