17ರಂದು ಸಿಎಂ ದೆಹಲಿ ಪ್ರವಾಸ, ಬಿಜೆಪಿ ಪಾಳಯದಲ್ಲಿ ರಾಜಕೀಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರು ಇದೇ 17 ರಂದು ದೆಹಲಿ ಪ್ರವಾಸ ಕೈಗೊಳ್ಳಲಿದ್ದು,ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗೆಳು ಗರಿಗದರಿವೆ. ಅಲ್ಲದೆ ಸಚಿವಾಕಾಂಕ್ಷಿಗಳ ಎದೆ ಬಡಿತವನ್ನು ಹೆಚ್ಚಿಸಿದೆ.

ಪ್ರವಾಸದ ವೇಳೆ ಸಿಎಂ ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆಯ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯನ್ನು ಕೊಂಡೊಯ್ಯಲಿರುವ ಸಿಎಂ, ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಲಿದ್ದಾರೆ.

ಆದರೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ. ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತದೆ. ವಿಸ್ತರಣೆಯೋ, ಪುನಾರಚನೆಯೋ ಎನ್ನುವುದು ವರಿಷ್ಠರ ಭೇಟಿ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಪಟ್ಟಿಯಲ್ಲಿ ವಲಸಿಗ ಮೂವರು ಎಂಎಲ್‌ಸಿಗಳ ಹೆಸರಿನ ಜೊತೆಗೆ ಇಬ್ಬರು ಪಕ್ಷದ ಮೂಲ ಆಕಾಂಕ್ಷಿ ಶಾಸಕರ ಹೆಸರುಗಳಿವೆ ಎನ್ನಲಾಗಿದೆ.ಇದರ ಜೊತೆಗೆ ಮಳೆ ಹಾನಿ ಕುರಿತು ಹೆಚ್ಚಿನ ಪರಿಹಾರಕ್ಕಾಗಿ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ಸೇರಿ ಕೆಲ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.

ಸಿಎಂ ಒಟ್ಟು ಮೂರು ದಿವಸ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವ ಸಂಬಂಧ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಇದರೊಂದಿಗೆ ಬಾಕಿ ಇರುವ ವಿವಿಧ ಅನುದಾನಗಳು, ಕಾಮಗಾರಿಗಳಿಗೂ ವಿವಿಧ ಸಚಿವರ ಭೇಟಿ ಮಾಡಿ ಸಿಎಂ ಒಪ್ಪಿಗೆ ಪಡೆಯಲಿದ್ದಾರೆ.

ಇದರೊಂದಿಗೆ 8,000 ಕೋಟಿ ರೂ. ನೆರೆ ಹಾನಿ ನಷ್ಟ ಪರಿಹಾರವನ್ನೂ ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ. ಅಲ್ಲದೆ ಬಾಕಿ ಇರುವ ವಿವಿಧ ಅನುದಾನಗಳು, ಕಾಮಗಾರಿಗಳಿಗೂ ವಿವಿಧ ಸಚಿವರ ಭೇಟಿ ಮಾಡಿ ಸಿಎಂ ಒಪ್ಪಿಗೆ ಪಡೆಯಲಿದ್ದಾರೆ.

ಸಿಎಂ ಜೊತೆ ಪುತ್ರ ಬಿ.ವೈ.ವಿಜಯೇಂದ್ರ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಸಿಎಂ ದೆಹಲಿ ಭೇಟಿ ರಾಜಕೀಯ ವಲಯದಲ್ಲೂ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin