ದಿಢೀರ್ ದೆಹಲಿಗೆ ಹಾರಿದ ಸಿಎಂ ಯಡಿಯೂರಪ್ಪ, ಟ್ರಂಪ್ ಔತಣಕೂಟದಲ್ಲಿ ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.25- ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗಿನ ಔತಣಕೂಟದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ದೇಶಕ್ಕೆ ಆಗಮಿಸಿದ್ದು, ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ಡೊನಾಲ್ಡ್ ಟ್ರಂಪ್ ದಂಪತಿಗೆ ಔತಣಕೂಟ ಆಯೋಜಿಸಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಔತಣಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಆಹ್ವಾನ ನೀಡಲಾಗಿದ್ದು, ಯಡಿಯೂರಪ್ಪ ಇಂದು ಬೆಳಗ್ಗೆ 11.30ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.ಎಲ್ಲಾ ಪೂರ್ವ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ಇಂದು ರಾತ್ರಿ ದೆಹಲಿಯಲ್ಲಿ ನಡೆಯುವ ಅಧ್ಯಕ್ಷರ ಔತಣಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸಿಎಂ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಅವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.

ಯಡಿಯೂರಪ್ಪ ಸೋಮವಾರ ಶಿವಮೊಗ್ಗ ಪ್ರವಾಸದಲ್ಲಿದ್ದರು. ಔತಣಕೂಟದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಪಾಲ್ಗೊಳ್ಳುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದರು. ಆದರೆ ಇಂದು ಧಿಡೀರ್ ಆಗಿ ವಿಶ್ವದ ದೊಡ್ಡಣ್ಣನವರ ಜೊತೆ ಔತಣಕೂಟದಲ್ಲಿ ಭಾಗಿಯಾಗುವ ನಿರ್ಧಾರ ಕೈಗೊಂಡಿದ್ದಾರೆ. ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಿಎಂ ಸಂಜೆ 7ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಲಿದ್ದಾರೆ. ಔತಣಕೂಟ ಮುಗಿಸಿಕೊಂಡು ನಾಳೆ ವಾಪಸ್ ಬರಲಿದ್ದಾರೆ.

ಸೋಮವಾರ ಬೆಳಗ್ಗೆ 11.40ಕ್ಕೆ ಅಹಮದಾಬಾದ್‍ಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ ತಾಜ್ ಮಹಲ್ ವೀಕ್ಷಣೆ ಮಾಡಿರುವ ಅವರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ರಾತ್ರಿ ಟ್ರಂಪ್ ಅವರಿಗೆ ಔತಕೂಟ ಏರ್ಪಡಿಸಲಾಗಿದೆ.

Facebook Comments

Sri Raghav

Admin