ಉಪಚುನಾವಣೆಯ ಕಣದಿಂದ ಸಿಎಂ ದೂರ ದೂರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಬಾರಿ ಮಾತ್ರ ಅಭ್ಯರ್ಥಿ ಪರ ಮತಯಾಚನೆ ಮಾಡುವ ಮೂಲಕ ಉಪಚುನಾವಣೆಯ ಕಣದಿಂದ ಬಹತೇಕ ದೂರ ಉಳಿಯುವ ಸಾಧ್ಯತೆ ಇದೆ.

ಶುಕ್ರವಾರ ಇಲ್ಲವೇ ಶನಿವಾರ ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು,ಪ್ರತಿಷ್ಟೆಯ ಕಣವಾಗಿರುವ ಬೆಂಗಳೂರಿನ ರಾಜರಾಜೇಶ್ವೇರಿ ನಗರದ ಪ್ರಚಾರದಿಂದಲೂ ದೂರ ಉಳಿಯುವ ಮುನ್ಸೂಚನೆ ನೀಡಿದ್ದಾರೆ.

ಹಾಗೆ ನೋಡಿದರೆ,ಯಡಿಯೂರಪ್ಪ ಎರಡೂ ಕ್ಷೇತ್ರಗಳಲ್ಲಿ ಕನಿಷ್ಟ ಪಕ್ಷ ಎರಡೆರೆಡು ಬಾರಿ ಅಭ್ಯರ್ಥಿಗಳ ಪರವಾಗಿ ಬಹಿರಂಗ ಸಮಾವೇಶದ ಮೂಲಕ ಪ್ರಚಾರ ನಡೆಸಲಿದ್ದಾರೆ ಎನ್ನಲಾಗುತ್ತಿತ್ತು. ಇದಕ್ಕಾಗಿ ಪಕ್ಷದ ವತಿಯಿಂದಲೂ ಅವರ ಪ್ರವಾಸದ ವೇಳಾ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು.

ಆದರೆ, ಒಂದು ದಿನ ಮಾತ್ರವೇ ಪ್ರಚಾರ ನಡೆಸುತ್ತೇನೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು, ಹಲವು ಕುತೂಹಲಗಳಿಗೆ ಕಾರಣವಾಗಿದ್ದಾರೆ. ಅಂದಹಾಗೆ ಅವರು, ಪ್ರಚಾರದಿಂದ ದೂರ ಉಳಿಯಲು ಕಾರಣ, ಪ್ರವಾಹ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಇತ್ತೀಚಿಗೆ ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿರುವುದರ ಜೊತೆಗೆ ಕೆಲವು ಕಡೆ ಪ್ರವಾಹ ಉಂಟಾಗಿ ನಿರೀಕ್ಷೆಗೂ ಮೀರಿದ ಹಾನಿ ಉಂಟಾಗಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ನಿಂತ ಬೆಳೆ, ಜಾನುವಾರು ಮನೆಗಳ ಕುಸಿತ, ಪ್ರಾಣಹಾನಿ ಸೇರಿದಂತೆ ಸುಮಾರು 25 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ಆಂದಾಜು ಮಾಡಲಾಗಿದೆ.

ಗಾಯದ ಮೇಲೆ ಬರೆ ಎಳೆದರು ಎಂಬಂತೆ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲೂ ಮಹಾಮಳೆಯಾಗಿ ಅನೇಕ ಕಡೆ ಮನೆಗಳು ಕುಸಿದು ಬಿದ್ದಿದ್ದರೆ, ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ.

ಹೀಗೆ ಸಾಲು ಸಾಲು ಆನಾಹುತಗಳು ಎಡಬಿಡದೆ ಸಂಭವಿಸುತಿರುವ ಕಾರಣ ತುಸು ಧೃತಿಗೆಟ್ಟಿರುವ ಯಡಿಯೂರಪ್ಪ ಅವರು, ಉಪಚುನಾವಣೆಯ ಕಣದಿಂದಲೇ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಪ್ರವಾಹದ ಸಂದರ್ಭದಲ್ಲಿ ಪ್ರಚಾರ ನಡೆಸಿದರೆ, ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಅಳುಕಿನಿಂದ ಪಕ್ಷದ ಪ್ರಮುಖರೇ ಪ್ರಚಾರ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನು ಪ್ರಚಾರಕ್ಕೆ ಬಂದರೆ ಅಭ್ಯರ್ಥಿಗಳಿಗೆ ಅನುಕೂಲಕ್ಕಿಂತ ಆನಾನುಕೂಲವಾಗುವ ಸಾಧ್ಯತೆಯೇ ಹೆಚ್ಚಾಗಿದೆ.ಮುಖ್ಯಮಂತ್ರಿ ಅವರಿಗೆ ಪ್ರವಾಹಕ್ಕಿಂತಲೂ ಉಪಚುನಾವಣೆಯೇ ಪ್ರಮುಖವಾಗಿದೆ ಎಂದು ವಿರೋಧ ಪಕ್ಷದವರು ಅಪಪ್ರಚಾರ ನಡೆಸಬಹುದು.

ಆದರೂ, ಎರಡೂ ಕ್ಷೇತ್ರಗಳ ಮೇಲುಸ್ತುವಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ. ಪ್ರಚಾರ ನಡೆಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಈ ಉಪಸಮರದಲ್ಲಿ ಬಿಎಸ್‍ವೈ ಅವರ ಅನುಪಸ್ಥಿತಿ ಪಕ್ಷದ ಕಾರ್ಯಕರ್ತರಿಗೆ ಎದ್ದು ಕಾಣವುದಂತೂ ದಿಟ.

Facebook Comments

Sri Raghav

Admin