ಸಿಎಂ ಯಡಿಯೂರಪ್ಪಗೆ ಕಷ್ಟಗಳ ಮೇಲೆ ಕಷ್ಟವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ನಾನು ಮುಖ್ಯಮಂತ್ರಿಯಾದ ದಿನದಿಂದಲೂ ಒಂದಿಲ್ಲೊಂದು ಕಷ್ಟಗಳನ್ನು ಎದುರಿಸುತ್ತಲೇ ಇದ್ದೇನೆ. 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ನನಗೆ ಅಗ್ನಿಪರೀಕ್ಷೆಯಾಗಿದ್ದು ಇದನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಮನಬಿಚ್ಚಿ ಮಾತನಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ನಾನು ನೆಮ್ಮದಿಯಿಂದ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. ಒಂದು ಬಾರಿ ಏಳು ದಿನ ಮುಖ್ಯಮಂತ್ರಿಯಾಗಿ ಜೆಡಿಎಸ್ ಕೈ ಕೊಟ್ಟಿದ್ದರಿಂದ ರಾಜೀನಾಮೆ ನೀಡಬೇಕಾಯಿತು. ಬಳಿಕ ಮೂರು ವರ್ಷ ಮುಖ್ಯಮಂತ್ರಿಯಾಗಿ ಸ್ಥಾನವನ್ನು ಕಳೆದುಕೊಂಡೆ, ನಂತರ ಮೂರು ದಿನ ಸಿಎಂ ಆಗಿ ರಾಜೀನಾಮೆ ನೀಡಿದ್ದೇನೆ.

ಈಗ ಅನಿವಾರ್ಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿದ್ದೇನೆ. 17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ನಾನು ಮತ್ತೆ ಸಿಎಂ ಆಗಿದ್ದೇನೆ. ಆದರೂ ಈಗಲೂ ನನಗೆ ಪೂರ್ಣಮಟ್ಟದಲ್ಲಿ ಬಹುಮತವಿಲ್ಲ. ಪ್ರತಿ ಹೆಜ್ಜೆಯೂ ನನಗೆ ಅಗ್ನಿಪರೀಕ್ಷೆಯಾಗಿದೆ. ಇದನ್ನು ನಾನು ಸವಾಲಾಗಿ ಮೆಟ್ಟಿ ಯಶಸ್ವಿಯಾಗುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಒಂದು ದಿನವೂ ನಾನು ನನ್ನ ಸ್ವಂತ ಕೆಲಸಕ್ಕೆ ಬಳಸಿಕೊಂಡಿಲ್ಲ. ಸಿಎಂ ಆದ ಒಂದೇ ವಾರದಲ್ಲಿ ರಾಜ್ಯದ ನಾನಾ ಕಡೆ ಪ್ರವಾಹ ಉಂಟಾಯಿತು. ಸಹೋದ್ಯೋಗಿಗಳು ಇಲ್ಲದಿದ್ದರೂ ಏಕಾಂಗಿಯಾಗಿಯೆ ಪ್ರಚಾರ ನಡೆಸಿ ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದೇನೆ.

ನನಗೆ ಅಧಿಕಾರದ ದಾಹ ಇಲ್ಲ.ರಾಜ್ಯಕ್ಕೆ ಒಂದಿಷ್ಟು ಏನಾದರೂ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದೇನೆ. ಈಗ ಅತ್ಯಂತ ಕಠಿಣವಾದ ಪರಿಸ್ಥಿತಿ ಬಂದಿದೆ. ಈ ಅಗ್ನಿಪರೀಕ್ಷೆಯಲ್ಲಿ ನಾನು ಗೆದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಆಡಳಿತ ಕೊಡುತ್ತೇನೆ ಇದಕ್ಕಾಗಿ ನಿಮ್ಮ ಬೆಂಬಲ ಬೇಕೆಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಒಂದೊಂದು ಕ್ಷೇತ್ರವೂ ನಿರ್ಣಾಯಕವಾಗಿದೆ. ನಾನು ಅಧಿಕಾರದಲ್ಲಿದ್ದರೆ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕೆಯಾಗುತ್ತದೋ ಎಂಬ ಭೀತಿಯಿಂದ ಕೆಲವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ ಇದೊಂದು ಬಾರಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

ಏನೇ ಆದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯಲಿದೆ. ಕಾಂಗ್ರೆಸ್-ಜೆಡಿಎಸ್ ಏನೇ ಕುತಂತ್ರ ನಡೆಸಿದರೂ ಯಶಸ್ವಿಯಾಗುವುದಿಲ್ಲ. ನಮ್ಮನ್ನು ನಂಬಿ ಬಂದಿರುವ ಶಾಸಕರು ಈ ಉಪಚುನಾವಣೆಯಲ್ಲಿ ಗೆದ್ದು ಬರಬೇಕು. ಅದಕ್ಕಾಗಿ ನಿಮ್ಮೆಲ್ಲ ವೈಮನಸ್ಸುಗಳನ್ನು ಮರೆತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೋರಿದ್ದಾರೆ.

Facebook Comments

Sri Raghav

Admin