ಸಿಎಂ ಯಡಿಯೂರಪ್ಪ ಹೊಸ ಗೇಮ್ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.21- ನಾಯಕತ್ವ ಬದಲಾವಣೆ ಇನ್ನೇನು ಆಗಿಯೇ ಬಿಡಲಿದೆ ಎಂಬ ಸನ್ನಿವೇಶದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಆಟ ಶುರುಮಾಡಿದ್ದಾರೆ. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆದರೆ ಅದು ಒಂದು ಪ್ರಭಾವಿ ಸಮುದಾಯವನ್ನು ಎದುರು ಹಾಕಿಕೊಂಡಂತೆ ಎಂಬ ವ್ಯಾಖ್ಯಾನಗಳು ಈಗಾಗಲೇ ಶುರುವಾಗಿದೆ. ಒಂದು ವೇಳೆ ಬಿಎಸ್‍ವೈ ಬದಲಾಗಿ ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಅದು ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆಯೂ ಇದೆ.

ಕರ್ನಾಟಕದ ಮುಖ್ಯಮಂತ್ರಿಬಿಎಸ್‍ವೈ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಅವರು ಬೆಳೆದು ಬಂದ ಹೋರಾಟದ ಹಾದಿ, ಸದಾ ಕಾಲ ಸಮುದಾಯ ಅವರ ಬೆನ್ನಿಗೆ ನಿಂತಿರೋದು ಹಾಗೂ ಸಮುದಾಯಕ್ಕಾಗಿ ಯಡಿಯೂರಪ್ಪ ಅವರ ಸೇವೆಯನ್ನು ಅಲ್ಲಗಳೆಯುವಂತೆಯೇ ಇಲ್ಲ. ಜೊತೆಯಲ್ಲೇ ರಾಜ್ಯದ ಇನ್ನಿತರ ಎಲ್ಲ ಸಮುದಾಯಗಳ ನಾಯಕರ ವಿಶ್ವಾಸವೂ ಬಿಜೆಪಿ ಪರ ವಾಲುವಂತೆ ಮಾಡುವಲ್ಲಿ ಯಡಿಯೂರಪ್ಪ ಪಾತ್ರ ಇದ್ದೇ ಇದೆ.

ರಾಜ್ಯದ ಉದ್ದಗಲಕ್ಕೂ ಓಡಾಡಿ ಬಿಜೆಪಿ ಪಕ್ಷ ಸಂಘಟನೆ ಮಾಡಿರುವ ಯಡಿಯೂರಪ್ಪ, ವಿಧಾನಸಭೆಯಲ್ಲಿ ಒಂದೇ ಒಂದು ಸಂಖ್ಯಾ ಬಲದಲ್ಲಿದ್ದ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ್ದಾರೆ. ಶಿಕಾರಿಪುರದ ಕರ್ಮಭೂಮಿಯಿಂದ ವಿಧಾನಸೌಧದವರೆಗೂ ಬೆಳೆದುಬಂದ ಯಡಿಯೂರಪ್ಪ, ನಾಲ್ಕನೇ ಬಾರಿ ಸಿಎಂ ಪಟ್ಟಕ್ಕೆ ಏರಿದ್ದಾರೆ..! ಆದರೆ, ಪಟ್ಟ ಸುಭದ್ರವಾಗಿಲ್ಲ ಅನ್ನೋದೇ ಸಮಸ್ಯೆ..!

ಸಿಎಂ ಸ್ಥಾನಕ್ಕೇರಿದ ಮೇಲೆ ಯಡಿಯೂರಪ್ಪ 5 ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿ ಕಾರ್ಯನಿರ್ವಹಿಸಿದ ದಾಖಲೆಗಳೇ ಇಲ್ಲ..! 2017ರಲ್ಲಿ ಕೇವಲ 7 ದಿನ ಸಿಎಂ ಪಟ್ಟ, 2008ರಲ್ಲಿ 3 ವರ್ಷ, 2018ರಲ್ಲಂತೂ ಕೇವಲ ಎರಡನೇ ದಿನ ಸಿಎಂ ಸ್ಥಾನದಲ್ಲಿ ಕೂತಿದ್ದರು ಯಡಿಯೂರಪ್ಪ..! ಇದೀಗ 4ನೇ ಬಾರಿ ಸಿಎಂ ಸ್ಥಾನಕ್ಕೇರಿರುವ ಯಡಿಯೂರಪ್ಪ, 2 ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿ ಇರುವಾಗಲೇ ಕಂಟಕ ಎದುರಾಗಿದೆ..!

ಯಡಿಯೂರಪ್ಪ ಅವರ ಸಿಎಂ ಸ್ಥಾನಕ್ಕೆ ಎದುರಾಗಿರುವ ಈ ಕಂಟಕ ನಿವಾರಣೆಗೆ ಇದೀಗ ಪಕ್ಷಾತೀತವಾಗಿ ವೀರಶೈವ ಲಿಂಗಾಯತ ಸಮುದಾಯವೇ ಬೆಂಬಲವಾಗಿ ನಿಂತಿದೆ.ಇನ್ನು ರಾಜ್ಯದ ಉದ್ದಗಲಕ್ಕೂ ಇರುವ ಲಿಂಗಾಯತ ಸ್ವಾಮೀಜಿಗಳಂತೂ ಯಡಿಯೂರಪ್ಪ ಪರ ಟೊಂಕ ಕಟ್ಟಿ ನಿಂತಿದ್ದಾರೆ.

ಒಂದೆಡೆ ಸ್ವಾಮೀಜಿಗಳ ಬೆಂಬಲ, ಇಡೀ ಲಿಂಗಾಯತ ಸಮುದಾಯವೇ ಯಡಿಯೂರಪ್ಪ ಬೆನ್ನಿಗೆ ನಿಲ್ಲುವ ಭಯ, ಮತ್ತೊಂದೆಡೆ ಕಾಂಗ್ರೆಸ್ ಆದಿಯಾಗಿ ಇತರ ಪಕ್ಷಗಳ ಲಿಂಗಾಯತ ನಾಯಕರೂ ಯಡಿಯೂರಪ್ಪ ಪರವಾಗಿಯೇ ಬ್ಯಾಟಿಂಗ್ ಮಾಡ್ತಿರೋದು ಬಿಜೆಪಿ ಹೈಕಮಾಂಡ್‍ಗೆ ತಲೆನೋವು ತಂದಿರೋದಂತೂ ಸುಳ್ಳಲ್ಲ. ಇದಲ್ಲದೆ ಮತ್ತೊಂದು ಗೊಂದಲವೂ ಬಿಜೆಪಿ ಒಳಮನೆಯಲ್ಲಿದೆ.

# ಯಡಿಯೂರಪ್ಪ ಜಾಗದಲ್ಲಿ ಯಾರು..?
ಹೌದು.. ಇಡೀ ವೀರಶೈವ ಲಿಂಗಾಯತ ಸಮುದಾಯದ ವಿರೋಧವನ್ನೆಲ್ಲಾ ಕಟ್ಟಿಕೊಂಡು ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದೇ ಆದಲ್ಲಿ ಅವರ ಜಾಗಕ್ಕೆ ಯಾರು..? ಬಿಜೆಪಿಯಲ್ಲಿ ಎಲ್ಲ ಸಮುದಾಯಕ್ಕೂ ಸಲ್ಲುವ, ರಾಜ್ಯದ ಎಲ್ಲ ಪ್ರಾಂತ್ಯಗಳಲ್ಲೂ ಜನಪ್ರಿಯತೆ ಹೊಂದಿರುವ ನಾಯಕ ಯಾರಿದ್ದಾರೆ..? ಈ ಪ್ರಶ್ನೆಗೆ ಬಿಜೆಪಿ ಬಳಿಯೇ ಉತ್ತರವಿಲ್ಲ.

ಇಡೀ ಬಿಜೆಪಿಯೇ ಯಡಿಯೂರಪ್ಪ ಎಂಬಂತೆ ಬೆಳೆದು ಬಂದಿರುವಾಗ, ಅನಂತ್ ಕುಮಾರ್‍ರಂಥಾ ನಾಯಕರನ್ನೇ ಮೀರಿ ಬೆಳೆದ ಯಡಿಯೂರಪ್ಪಗೆ ಅವರಷ್ಟೇ ಚಾರ್ಮ್ ಇರುವ ಪರ್ಯಾಯ ನಾಯಕರೇ ಬಿಜೆಪಿಯಲ್ಲಿ ಇಲ್ಲ..! ಹೀಗಾಗಿ, ಬಿಜೆಪಿಯ ಈ ಬಲಹೀನತೆಯೇ ಯಡಿಯೂರಪ್ಪ ಅವರ ಬಲ..!

ಮುಂದಿನ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಬಿಎಸ್ ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದರು. ಆದರೆ ಅವರ ವಿರೋಧಿ ಬಣ ಮಾತ್ರ ನಾಯಕತ್ವ ಬದಲಾವಣೆಯ ಬಗ್ಗೆ ದಿನಾಂಕದ ಮೇಲೆ ದಿನಾಂಕ ನಿಗದಿ ಮಾಡುತ್ತಾ ಬರುತ್ತಿದ್ದಾರೆ.

Facebook Comments