4 ತಿಂಗಳ ನಂತರ ರಾಜ್ಯಪಾಲರನ್ನು ಭೇಟಿಮಾಡಿದ ಸಿಎಂ, ಮಹತ್ವದ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22- ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ಭೂ ಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತವಾದ ಭೇಟಿ ಎಂದು ಹೇಳಲಾಗಿದೆ. ಸುಮಾರು ನಾಲ್ಕು ತಿಂಗಳ ನಂತರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪನವರು, ರಾಜ್ಯದ ಸ್ಥಿತಿಗತಿ, ಕಾನೂನು ಸುವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ಕಾರ್ಯಕಲಾಪ ಪಟ್ಟಿಯಲ್ಲಿ ಇಂದು ರಾಜ್ಯಪಾಲರನ್ನು ಭೇಟಿಯಾಗುವ ಸಮಯ ನಿಗದಿಯಾಗಿರಲಿಲ್ಲ. ಇಂದು ಬೆಳಗ್ಗೆ ರಾಜಭವನದಿಂದ ಸಮಯಾವಕಾಶ ಸಿಕ್ಕಿದ್ದರಿಂದ 11 ಗಂಟೆಗೆ ರಾಜ್ಯಭವನಕ್ಕೆ ಆಗಮಿಸಿದ ಬಿಎಸ್‍ವೈ ಅವರು ಸುಮಾರು 12 ನಿಮಿಷಗಳ ಕಾಲ ರಾಜ್ಯಪಾಲರ ಜೊತೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ಏರಿಕೆಯಾಗಿದ್ದರೂ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಒದಗಿಸಿದರು.

ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಜಾರಿ ಮಾಡಿದ್ದು, ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆ, ಕೊರೊನಾ ಆಸ್ಪತ್ರೆಗಳು, ಹಾಸಿಗೆಗಳ ವ್ಯವಸ್ಥೆ, ವೈದ್ಯಕೀಯ ಪರಿಕರಗಳು ಸೇರಿದಂತೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಅಂಕಿಅಂಶಗಳ ಸಹಿತ ಮಾಹಿತಿಯನ್ನು ನೀಡಿದರು.

ಇದೇ ವೇಳೆ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಏಕೆ ಮಾಡಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ದೇಶದ ಯಾವುದೇ ರಾಜ್ಯಗಳಲ್ಲೂ ಇಂತಹ ನಿಯಮಗಳಿಲ್ಲ.

ಕೃಷಿಗೆ ಉತ್ತೇಜನ ನೀಡುವ ಅಗತ್ಯವಿದೆ. ಯುವಕರು ಹಳ್ಳಿಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಜಮೀನು ಸಿಗಬೇಕಾದ ಅಗತ್ಯವಿರುವುದರಿಂದ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಸಿಎಂ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.  ಇದೇ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ಕೇಂದ್ರ ಸರ್ಕಾರದ ಸೂಚನೆಯಂತೆ ನಾವು ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದೇವೆ. ಈ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ.

ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾ ಟ ಮಾಡಬಹುದು. ನನ್ನ ಬೆಳೆ, ನಮ್ಮ ಹಕ್ಕು ಎಂಬ ನಿಯಮವನ್ನು ಜಾರಿ ಮಾಡಿದ್ದೇವೆ. ಕಾಯ್ದೆಗೆ ತಿದ್ದುಪಡಿ ಮಾಡಿರುವುದಕ್ಕೆ ರೈತರಿಂದಲೂ ವಿರೋಧವಿಲ್ಲ ಎಂದು ಸಿಎಂ ತಿಳಿಸಿಕೊಟ್ಟರು ಎನ್ನಲಾಗಿದೆ.

ಇನ್ನು ಕೊರೊನಾ ನಿಯಂತ್ರಣ, ಭೂ ಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೊರೊನಾ ನಿಯಂತ್ರಣಕ್ಕೆ ಖರೀದಿ ಮಾಡಿರುವ ಉಪಕರಣಗಳು ಸೇರಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ.

ಸರ್ಕಾರ ಎಲ್ಲವನ್ನು ಪಾರದರ್ಶಕವಾಗಿಯೇ ನಡೆಸಿದೆ.  ಕೇವಲ ರಾಜಕೀಯಕ್ಕಾಗಿ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಈಗಾಗಲೇ ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಸಚಿವರು ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ವಿಪಕ್ಷಗಳು ಕೇವಲ ಆರೋಪಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

Facebook Comments

Sri Raghav

Admin