ಸಿಕ್ಕ ಚಾನ್ಸ್ ಬಳಸಿಕೊಂಡು ಹೈಕಮಾಂಡ್‌ಗೆ ಖಡಕ್ ಸಂದೇಶ ರವಾನಿಸಿದ ಸಿಎಂ ಯಡಿಯೂರಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.15-ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡದಿರುವುದು, ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನ ವಿಳಂಬ ಸೇರಿದಂತೆ ಮತ್ತಿತರ ಪ್ರಮುಖ ನಿರ್ಧಾರಗಳಲ್ಲಿ ದೆಹಲಿ ವರಿಷ್ಠರು ತಮ್ಮನ್ನು ಕಡೆಗಣಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿನ್ನೆ ದಾವಣಗೆರೆ ಜಿಲ್ಲೆ ಹರಿಹರದ ಪಂಚಮಶಾಲಿ ಕಾರ್ಯಕ್ರಮದಲ್ಲಿ ಅವರು ಶ್ರೀ ವಚಾನಂದ ಸ್ವಾಮೀಜಿಗಳ ಜೊತೆ ವಾಗ್ವಾದಕ್ಕಿಳಿದಿದ್ದು ಅವರ ರಾಜಕೀಯ ಕಾರ್ಯತಂತ್ರದ ಒಂದು ಭಾಗ ಎಂದು ಅರ್ಥೈಸಲಾಗಿದೆ. ನನಗೆ ಕುರ್ಚಿ ಮುಖ್ಯವಲ್ಲ. ಬೇಕಾದರೆ 24 ಗಂಟೆಯೊಳಗೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ಹೊರಹೋಗುತ್ತೇನೆ ಎಂದು ಹೇಳಿರುವುದು ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸುವ ಕಾರ್ಯತಂತ್ರ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ದೆಹಲಿ ವರಿಷ್ಠರು ಬಿಎಸ್‍ವೈ ಅವರನ್ನು ಎಲ್ಲ ಹಂತಗಳಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಳ್ಳಲು ಸತಾಯಿಸಿದ್ದು, ದೆಹಲಿ ಭೇಟಿಗೆ ಅವಕಾಶವನ್ನೇ ನೀಡಿರಲಿಲ್ಲ. ಉಪಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ಮತ್ತೆ ಪ್ರಭಾವಶಾಲಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಸಮಾರಂಭದಲ್ಲಿ ನೇರ ನೇರವಾಗಿಯೇ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಹಾಗೂ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ನಾನು ಕೇಳಿಕೊಂಡರೂ ನೀವು ಸ್ಪಂದಿಸುತ್ತಿಲ್ಲ ಎಂದು ಸಿಎಂ ಹೇಳಿದ್ದು ದೆಹಲಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ರಾಜ್ಯದ ಪಾಲಿಗೆ ಯಡಿಯೂರಪ್ಪ ಏನೋ ಹೀರೋ ಆದರು. ನಾವು ವಿಲನ್ ಆಗಿದ್ದೇವೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ರಾಜ್ಯ ನಾಯಕರ ಮುಂದೆ ಅಸಮಾಧಾನ ಹೊರಹಾಕಿದ್ದರು.ಇದರ ಪರಿಣಾಮವೇ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುವ ಸಂಬಂಧ ದೆಹಲಿಗೆ ಬರುತ್ತೇನೆ. ಸಮಯ ನಿಗದಿಪಡಿಸಿ ಎಂದು ಅಮಿತ್ ಷಾ ಮತ್ತು ಮೋದಿ ಅವರಿಗೆ ಕೇಳಿಕೊಂಡಿದ್ದರು.

ಎಷ್ಟೇ ಮನವಿ ಮಾಡಿಕೊಂಡರೂ ದೆಹಲಿ ಭೇಟಿಗೆ ಸಮಯ ನಿಗದಿಯಾಗಲಿಲ್ಲ. ಇತ್ತ ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರು ತಮಗೆ ಸಚಿವ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂದು ಬಾಯಿಬಾಯಿ ಬಿಡುತ್ತಿದ್ದಾರೆ. ಸಾಲದೆಂಬಂತೆ ಬಿಎಸ್‍ವೈ ಅವರ ನಿವಾಸಕ್ಕೆ ಭೇಟಿ ನೀಡಿ ಒತ್ತಡದ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದೆಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಯಡಿಯೂರಪ್ಪ ರಾಜೀನಾಮೆ ನೀಡುವ ಮಾತುಗಳನ್ನಾಡುತ್ತಿದ್ದಾರೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

2008ರಲ್ಲೂ ಯಡಿಯೂರಪ್ಪನವರಿಗೆ ಇದೇ ರೀತಿ ದೆಹಲಿ ನಾಯಕರಿಂದ ಕಿರಿಕಿರಿ ಉಂಟಾಗಿತ್ತು. ಲೋಕಾಯುಕ್ತ ವರದಿಯಲ್ಲಿ ಅವರ ಹೆಸರು ಕೇಳಿಬಂದಿದ್ದರಿಂದ ಬಲವಂತವಾಗಿ ರಾಜೀನಾಮೆ ಪಡೆಯುವುದಕ್ಕೂ ಮುನ್ನ ಇದೇ ರೀತಿ ಗೋಳಾಡಿಸಲಾಗಿತ್ತು. ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿದ್ದರೂ ಯಡಿಯೂರಪ್ಪ ಈಗಲೂ ದೆಹಲಿ ನಾಯಕರ ಮುಂದೆ ಗೋಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಮನೆಮಠ ಕಳೆದುಕೊಂಡಿರುವ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಕೇಂದ್ರದಿಂದ ಅಗತ್ಯ ನೆರವು ಸಿಗುತ್ತಿಲ್ಲ. ಪ್ರಾರಂಭದಲ್ಲಿ 1200 ಕೋಟಿ ಪರಿಹಾರ ನೀಡಲಾಯಿತು. ಅದು ಕೂಡ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಇತ್ತೀಚೆಗಷ್ಟೇ ರಾಜ್ಯಕ್ಕೆ 1869 ಕೋಟಿ ಹೆಚ್ಚುವರಿ ಪರಿಹಾರ ನೀಡಿದ್ದೇವೆ ಎಂದು ಹೇಳಲಾಗಿತ್ತು.

ವಾಸ್ತವವಾಗಿ ರಾಜ್ಯಕ್ಕೆ ಸಿಕ್ಕಿದ್ದು ಕೇವಲ 669 ಕೋಟಿ ಮಾತ್ರ. ಹೀಗೆ ಪ್ರತಿ ಹಂತದಲ್ಲೂ ದೆಹಲಿ ವರಿಷ್ಠರು ಬಿಎಸ್‍ವೈಗೆ ಮುಜುಗರ ಸೃಷ್ಟಿಸುವ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಇದ್ದಾರೆ .
ಇದೆಲ್ಲದರ ಪರಿಣಾಮವೇ ಯಡಿಯೂರಪ್ಪ, ನನ್ನನ್ನು ಕಡೆಗಣಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ನಾಯಕರಿಗೆ ರವಾನಿಸಿದ್ದಾರೆ.

ಸಂಪುಟ ವಿಸ್ತರಣೆ, ಸಚಿವರ ಸೇರ್ಪಡೆ, ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಪ್ರಮುಖ ತೀರ್ಮಾನಗಳಲ್ಲಿ ನನ್ನನ್ನು ಕೆಡಗಣಿಸಿದರೆ 2013ರ ಪರಿಸ್ಥಿತಿಯೇ ಮರುಕಳಿಸಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Facebook Comments

Sri Raghav

Admin