“ಉಪಚುನಾವಣೆಯಲ್ಲಿ 13 ಸ್ಥಾನ ಗೆಲ್ತೀವಿ, 2023ಗೆ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರ್ತೀವಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.8- ರಾಜ್ಯದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕನಿಷ್ಟ 13 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ತಲಾ ಒಂದೊಂದು ಸ್ಥಾನದಲ್ಲಿ ಗೆಲ್ಲಬಹುದಷ್ಟೆ ಎಂದರು. ನಮ್ಮ ಸರ್ಕಾರ ಮುಂದಿನ ಮೂರೂವರೆ ವರ್ಷಗಳ ಕಾಲ ಮುಂದುವರಿಯಲಿದೆ.

ಆ ಬಗ್ಗೆ ಯಾವುದೇ ಅನುಮಾನ ಬೇಡ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ಪಕ್ಷಗಳಾಗಿ ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಬೇಕು. ಆ ರೀತಿ ಸಹಕಾರ ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಮೂರೂವರೆ ವರ್ಷ ಪೂರ್ಣಗೊಳಿಸಿದ ನಂತರವೂ ರಾಜ್ಯದ ಜನತೆ ಬಿಜೆಪಿ ಕೈಹಿಡಿಯಲಿದ್ದಾರೆ. ಅಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 150 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡಿ ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ ಎಂದಿದ್ದರು.

ಆದರೆ, ಅಂತಹ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ನಾವು ಆಡಳಿತದಲ್ಲಿ ಮುಂದುವರಿದರೆ ಕಾಂಗ್ರೆಸ್ ಪ್ರತಿಪಕ್ಷದಲ್ಲಿ ಮುಂದುವರಿಯಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು ಎಂದು ಹೇಳಿದರು.

Facebook Comments

Sri Raghav

Admin