ನಾಳೆ ಮಧ್ಯಾಹ್ನದೊಳಗೆ ಸಚಿವರ ಪಟ್ಟಿ ಫೈನಲ್ : ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.18- ಸಂಪುಟಕ್ಕೆ ಯಾರು ಯಾರು ಸೇರ್ಪಡೆಯಾಗಲಿದ್ದಾರೆ ಎಂಬುದು ನಾಳೆ ಮಧ್ಯಾಹ್ನದೊಳಗೆ ಅಂತಿಮಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿಗದಿಯಾಗಿರುವಂತೆ ಮಂಗಳವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ.

ಸುಮಾರು 13ರಿಂದ 14 ಸಚಿವರು ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವರು. ನಾಳೆ ಮಧ್ಯಾಹ್ನದೊಳಗೆ ಸಂಪುಟಕ್ಕೆ ಸೇರುವವರ ಹೆಸರು ಅಂತಿಮವಾಗಲಿದೆ ಎಂದು ಹೇಳಿದರು.

ಮಂಗಳವಾರ 3ರಿಂದ 4 ಗಂಟೆಯೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಸಂಪುಟ ವಿಸ್ತರಣೆ ಮಾಡಲಿದ್ದೇನೆ. ಅಮಿತ್ ಷಾ ಜೊತೆ ನಿನ್ನೆ ಮಾತುಕತೆ ನಡೆಸಿದ್ದೇನೆ. ಸರ್ಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವವರು ಧೃತಿಗೆಡುವುದು ಬೇಡ. ನಿಮ್ಮೊಂದಿಗೆ ಸರ್ಕಾರ ಇದೆ. ನಿಮ್ಮ ಎಲ್ಲ ಕಷ್ಟಗಳನ್ನು ಪರಿಹರಿಸುತ್ತೇವೆ ಎಂದು ಬಿಎಸ್‍ವೈ ಜನರಿಗೆ ಧೈರ್ಯ ತುಂಬಿದರು.

ಮನೆಮಠ, ಆಸ್ತಿಪಾಸ್ತಿ, ಜನಜಾನುವಾರುಗಳು ಸೇರಿದಂತೆ ಎಲ್ಲವನ್ನು ಕಳೆದುಕೊಂಡು ಸಂತ್ರಸ್ತರಾಗಿರುವವರನ್ನು ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಮೊದಲ ಕರ್ತವ್ಯ. ಹೀಗಾಗಿಯೇ ನಾನು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟು ಜನರ ಸಂಕಷ್ಟಗಳನ್ನು ಆಲಿಸಿದ್ದೇನೆ.

ಪರಿಹಾರ ವಿತರಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು. ಆದರೆ ಜನರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು. ಈಗಾಗಲೇ ಸರ್ಕಾರ ತಕ್ಕಮಟ್ಟಿಗೆ ಸಂತ್ರಸ್ತರ ನೆರವಿಗೆ ಸ್ಪಂದಿಸುವ ಕೆಲಸ ಮಾಡಿದೆ.

ಅಗತ್ಯವಿರುವ ಕಡೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ, ಮನೆ ಕಳೆದುಕೊಂಡವರಿಗೆ ಪರಿಹಾರ, ಜಾನುವಾರುಗಳು ಸಾವನ್ನಪ್ಪಿದ್ದರೂ ಪರಿಹಾರ ಘೋಷಿಸಿದ್ದೇವೆ.

ಬೆಳೆ ನಾಶವಾಗಿದ್ದರೆ ಅದಕ್ಕೂ ಪರಿಹಾರ ನೀಡಲಾಗುವುದು. ಇದೀಗ ಪ್ರವಾಹ ಕಡಿಮೆಯಾಗಿರುವುದರಿಂದ ಅಧಿಕಾರಿಗಳು ಸಮೀಕ್ಷೆಯನ್ನು ಆರಂಭಿಸಿದ್ದಾರೆ. ವರದಿ ಬಂದ ನಂತರ ಎಲ್ಲರಿಗೂ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಬಳಿ ಯಡಿಯೂರಪ್ಪನವರಿಗೆ ಹಣ ಕೇಳಲು ತಾಕತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧ್ಯಯನ ತಂಡ ವರದಿ ಕೊಡದೆ ಪರಿಹಾರ ಕೊಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ಪರಿಹಾರದ ಹಣದ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯನವರಿಗೆ ಅರ್ಥವಾಗುತ್ತದೆ. ಸ್ವಲ್ಪ ಸಮಾಧಾನದಿಂದ ಇರಬೇಕೆಂದು ಬಿಎಸ್‍ವೈ ಸಲಹೆ ಮಾಡಿದರು.

Facebook Comments

Sri Raghav

Admin