‘ವಲಸೆ ಕಾರ್ಮಿಕರು ಗಾಳಿಸುದ್ದಿಗೆ‌ ಕಿವಿಗೊಟ್ಟು ರಾಜ್ಯ ತೊರೆಯಬಾರದು’ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಹತೋಟಿಯಲ್ಲಿದ್ದು, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರ್ಥಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಯಾವುದೇ ಅಡ್ಡಿಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೆಂಪುವಲಯ ಹೊರತುಪಡಿಸಿ ಇತರ ಕಡೆ ಆರಂಭಿಸಲಿದ್ದು ವಲಸೆ ಕಾರ್ಮಿಕರು ಗಾಳಿಸುದ್ದಿಗೆ‌ ಕಿವಿಗೊಟ್ಟು ರಾಜ್ಯ ತೊರೆಯಬಾರದು ಎಲ್ಲರಿಗೂ ಉದ್ಯೋಗ ಹಾಗು ವಸತಿ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರ ಮಾಡಲಿದೆ ಎಂದು ತಿಳಿಸಿದರು ‌

ನಿರ್ಮಾಣ ವಲಯದ ಪ್ರಮುಖರ ಜೊತೆ ಸಭೆ ನಡೆಸಿದ ಅವರು, ಕೆಂಪು ವಲಯ ಹೊರತುಪಡಿಸಿ ಇತರೆಡೆ ವ್ಯಾಪಾರ, ವಹಿವಾಟು, ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಕೈಗಾರಿಕೆಗಳನ್ನು ಅಗತ್ಯ ಪ್ರಮಾಣದಲ್ಲಿ ಆರಂಭಿಸಬಹುದಾಗಿದ್ದು, ಇದಕ್ಕಾಗಿ ಸೂಕ್ತ ವೇದಿಕೆ ಸಿದ್ಧಪಡಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.

ಕಾರ್ಮಿಕರು ಸಮೂಹ ಸನ್ನಿಗೆ ಒಳಗಾದಂತೆ ತಮ್ಮ ಸ್ವಸ್ಥಾನಗಳಿಗೆ ತೆರಳುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ, ಬಿಲ್ಡರ್ ಗಳು ಸೂಕ್ತ ಉದ್ಯೋಗಾವಕಾಶ ನೀಡಿ ಕಾರ್ಮಿಕರನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು. ಮತ್ತೆ ತಮ್ಮ ಊರುಗಳಿಗೆ ತೆರಳುವುದನ್ನು ತಡೆಯಬೇಕು ಎಂದರು.

ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಸಕಾಲಕ್ಕೆ ವೇತನ ಪಾವತಿ ಮಾಡಬೇಕು. ಕಾರ್ಮಿಕರು ಸಹ ಊಹಾಪೋಹಗಳಿಗೆ ಕಿವಿಗೊಟ್ಟು ಅನಗತ್ಯವಾಗಿ ಪ್ರಯಾಣ ಮಾಡಬಾರದು ಎಂದು ಸಲಹೆ ನೀಡಿದರು. ತಪ್ಪು ಕಲ್ಪನೆಯಲ್ಲಿ ಬಹಳ‌ದೊಡ್ಡ ಮಟ್ಟದಲ್ಲಿ ವಲಸೆ ಮಾಡಲಾಗುತ್ತಿದೆ ಅದನ್ನು ತಡೆಯಬೇಕಿದ್ದು ಕಾರ್ಮಿಕರು ಇಲ್ಲಿಯೇ ಇದ್ದು ಕೆಲಸ ಮಾಡುವಂತೆ ಮನವಿ ಮಾಡಿದರು.

ಬಳಿಕ ಲಾಕ್ ಡೌನ್ ಸಂದರ್ಭದಲ್ಲಿ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಹತ್ವದ ಸಭೆ ನಡೆಸಿದರು.ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕ್ರೆಡಾಯ್ ಪದಾಧಿಕಾರಿಗಳೊಂದಿಗೂ ಸಭೆ ನಡೆಸಿದ ಯಡಿಯೂರಪ್ಪ, ಉದ್ಯೋಗ ರಕ್ಷಣೆಗೆ ಆದ್ಯತೆ ನೀಡಬೇಕು. ನೌಕರರ ಹಿತರಕ್ಷಣೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ನೇಕಾರರ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡಲಾಗಿದೆ.ರೈತರ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡಲಾಗಿದೆ.

Facebook Comments

Sri Raghav

Admin