ನೆರೆ ಪರಿಹಾರ ನೀಡದ ಕೇಂದ್ರದ ವಿರುದ್ಧ ಸ್ವತಃ ಸಿಎಂ ಯಡಿಯೂರಪ್ಪ ಆಕ್ರೋಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.12-ರಷ್ಯಾ ದೇಶಕ್ಕೆ ಒಂದು ಬಿಲಿಯನ್ ಡಾಲರ್ ಸಾಲ ನೀಡಲು, ಭೂಕಂಪ ಪೀಡಿತ ನೇಪಾಳಕ್ಕೆ ನೆರವು ನೀಡಲು ಮುಂದಾದ ಕೇಂದ್ರ ಸರ್ಕಾರ ಇಪ್ಪತ್ತೈದು ಮಂದಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸಿದ ಕರ್ನಾಟಕ ನೆರೆಯಿಂದ ತತ್ತರಿಸುತ್ತಿದ್ದರೂ ನೆರವಿಗೆ ಧಾವಿಸದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಅಸಮಾಧಾನ ತೋಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

ತಮ್ಮ ಆಪ್ತರ ಬಳಿ ಈ ಕುರಿತು ಚರ್ಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕ ಬಿಜೆಪಿಯ ಇಪ್ಪತ್ತೈದು ಮಂದಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸಿತು. ಆದರೆ ಗೆಲ್ಲಿಸಿ ಕಳಿಸಿದ ಜನ ಇವತ್ತು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಅವರಿಗೆ ಉತ್ತರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಬಾರಿಯ ಜಲಪ್ರಳಯದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳು ತತ್ತರಿಸಿವೆ. 50 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ್ಚ ನಷ್ಟವಾಗಿದೆ. ಆದರೆ ನೆರೆ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ನೀಡಿದ್ದೇವೆ. ಹೆಚ್ಚು ಹಣ ನೀಡಲು ನಮ್ಮ ಬಳಿ ದುಡ್ಡಿಲ್ಲ. ನೆರವಿಗೆ ಧಾವಿಸಬೇಕಾದ ಕೇಂದ್ರ ಸರ್ಕಾರವೂ ಆ ಕುರಿತು ಯೋಚಿಸುತ್ತಿಲ್ಲ ಎಂದು ಬೇಸರಗೊಂಡಿದ್ದಾರೆ.

ರಷ್ಯಾ ದೇಶಕ್ಕೆ ನಮ್ಮ ಪ್ರಧಾನಿ ಒಂದು ಬಿಲಿಯನ್ ಡಾಲರ್ ಸಾಲ ಘೋಷಿಸುತ್ತಾರೆ. ಭೂಕಂಪ ಪೀಡಿತ ನೇಪಾಳಕ್ಕೆ ನೆರವಿನ ಹಸ್ತ ಚಾಚುತ್ತಾರೆ. ಆದರೆ ಬಿಜೆಪಿಗೆ ಸಂಸತ್ ಚುನಾವಣೆಯಲ್ಲಿ ಅಭೂತ ಪೂರ್ವ ಬೆಂಬಲ ನೀಡಿದ ಕರ್ನಾಟಕದ ಕಡೆ ತಿರುಗಿಯೂ ನೋಡುತ್ತಿಲ್ಲ.

ಈಗಾಗಲೇ ಕೇಂದ್ರದ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ಹೋಗಿದೆ.ನಷ್ಟದ ಪ್ರಮಾಣ ಏನೆಂಬುದರ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ವಿವರ ನೀಡಿದೆ. ಆದರೆ ಪ್ರಧಾನಿ ಮೋದಿ ಅವರಿಗೆ ಕರ್ನಾಟಕಕ್ಕೆ ನೆರವು ನೀಡಬೇಕು ಎಂದೇ ಅನ್ನಿಸುತ್ತಿಲ್ಲ.

ಚಂದ್ರಯಾನ-2 ರ ಯಶಸ್ಸಿಗೆ ಸಾಕ್ಷಿಭೂತರಾಗಲು ಇಲ್ಲಿಗೆ ಬಂದ ಪ್ರಧಾನಿಗಳು ಅದು ವಿಫಲಗೊಂಡ ಬೆಳವಣಿಗೆಯಿಂದ ಅಸಮಾಧಾನಗೊಂಡರು. ಅದು ಸಹಜ ಕೂಡ. ಆದರೆ ಈ ಸಂದರ್ಭದಲ್ಲಿ ಅವರಿಗೆ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಮನವಿ ಸಲ್ಲಿಸಬೇಡಿ ಎಂಬ ಸೂಚನೆ ನಮಗೆ ನೀಡಲಾಯಿತು ಎಂದು ಬಿಎಸ್‍ವೈ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಾವು ಎಷ್ಟೇ ಹೇಳಿದರೂ ಆರ್ಥಿಕ ಹಿಂಜರಿತದಿಂದ ಜನ ಕಂಗಾಲಾಗಿದ್ದಾರೆ.ದಿನದಿಂದ ದಿನಕ್ಕೆ ಈ ಕಾರಣಕ್ಕಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿರುವ ಸಿಎಂ ಯಡಿಯೂರಪ್ಪ ಈ ಎಲ್ಲ ಕಾರಣಗಳು ಮುಂದಿನ ದಿನಗಳಲ್ಲಿ ಪಕ್ಷ ನೆಲ ಕಚ್ಚುವಂತೆ ಮಾಡಲಿವೆ ಎಂದಿದ್ದಾರೆ.

ನೆರೆ ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಪ್ರವಾಹಕ್ಕೆ ತುತ್ತಾದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರಗಳು ಬಿಜೆಪಿ ಬೆಂಬಲಕ್ಕೆ ನಿಂತಿವೆ.

ಈಗ ಕೇಂದ್ರದ ಧೋರಣೆ ಅವರ ಕಣ್ಣು ಕೆಂಪಗಾಗಿಸಿರುವುದು ಮಾತ್ರವಲ್ಲ,ನಿಮ್ಮನ್ನು ನಂಬಿ ಮತ ಹಾಕಿದ ನಮಗೆ ಇಂತಹ ಶಿಕ್ಷೆ ನೀಡಬಾರದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜಕ್ಕೂ ನಮಗೆ ನುಂಗಲಾರದ ತುತ್ತು ಎಂದು ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪಕ್ಷ ಬಹಳ ಕಷ್ಟವನ್ನು ಎದುರಿಸಬೇಕಾಗುತ್ತದೆ.ಹಾಗೊಂದು ವೇಳೆ ವಿಧಾನಸಭೆಯ ಮಧ್ಯಂತರ ಚುನಾವಣೆಯೇ ಎದುರಾದರೆ ನಿಶ್ಚಿತವಾಗಿ ನಾವು ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಹಾಗೆಯೇ ಉಪಚುನಾವಣೆಗಳು ಎದುರಾದರೂ ನಾವು ಆಘಾತಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದಿರುವ ಯಡಿಯೂರಪ್ಪ ಕೇಂದ್ರದ ಧೋರಣೆ ಬದಲಾಗದಿದ್ದರೆ ನಾನು ಕೂಡ ಅಸಹಾಯಕನಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Facebook Comments

Sri Raghav

Admin