ರಾಜ್ಯದ 6 ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಗಳಿಗೆ ಕೊರೋನಾ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಆರು ಸಚಿವರು, ಶಾಸಕರು, 14 ಐಎಎಸ್, ಐಪಿಎಸ್ ಅಧಿಕಾರಿಗಳು, ಸಿಎಂ ಗೃಹ ಕಚೇರಿಯ ಸಿಬ್ಬಂದಿ ಮತ್ತಿತರರಿಗೆ ಕೊರೊನಾ ಆತಂಕ ಎದುರಾಗಿದೆ.

ಸಿಎಂ ಗೃಹಕಚೇರಿ ಕೃಷ್ಣ ಹಾಗೂ ಅಧಿಕೃತ ನಿವಾಸ ಕಾವೇರಿಯಲ್ಲಿ ನಾಲ್ವರಿಗೆ ಹಾಗೂ ಗೃಹ ಕಚೇರಿ ಕೃಷ್ಣಾದಲ್ಲಿ 7 ಜನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು 11 ಜನ ಸಿಬ್ಬಂದಿಗೆ ಸೋಂಕು ತಗುಲಿದೆ.

ಹೀಗಾಗಿ ಯಡಿಯೂರಪ್ಪನವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಚಿವರು, ಶಾಸಕರು ಮತ್ತು ಅಧಿಕಾರಿ ವರ್ಗಕ್ಕೂ ಮಹಾಮಾರಿ ಕೊರೊನಾ ಒಕ್ಕರಿಸಲಿದೆಯೇ ಎಂಬ ಭೀತಿ ಆವರಿಸಿದೆ.

ಈಗಾಗಲೇ ಕಾವೇರಿ ನಿವಾಸದಲ್ಲಿನ ಅಡುಗೆ ಭಟ್ಟ ಹಾಗೂ ಮೂವರು ಮನೆ ಕೆಲಸದವರಿಗೆ ಸೋಂಕು ತಗುಲಿದೆ. ಅಲ್ಲದೆ ಸಿಎಂ ಭದ್ರತಾ ಅಧಿಕಾರಿ, ವಿಶೇಷ ಕರ್ತವ್ಯಾಧಿಕಾರಿ, ಕಾರು ಚಾಲಕ ಸೇರಿ ಗೃಹ ಕಚೇರಿ ಕೃಷ್ಣಾದಲ್ಲಿ ಒಟ್ಟು 7 ಜನರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಂಬುಲೆನ್ಸ್ ಮೂಲಕ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್‍ಗೆ ಕರೆದೊಯ್ಯಲಾಗಿದೆ.

ಸಿಎಂ ಕಾವೇರಿ, ಕೃಷ್ಣದಲ್ಲಿ ಒಟ್ಟು 11 ಜನರಿಗೆ ಪಾಸಿಟಿವ್ ಬಂದಿದ್ದು, 8 ಜನ ಸಿಬ್ಬಂದಿಯನ್ನು ಶಿಫ್ಟ್ ಮಾಡಲಾಗಿದೆ. ಒಟ್ಟು 50 ಜನರಿಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದು ರೋಗ ಲಕ್ಷಣ ಇದ್ದರೆ ಮತ್ತೆ ಗಂಟಲು ದ್ರವ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಮನೆ ಹಾಗೂ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.

ಎಲ್ಲ ಸಿಬ್ಬಂದಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ಶಿಫ್ಟ್ ಮಾಡಲಾಗಿದೆ. ಎಲ್ಲರಿಗೂ ಅಲ್ಲೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಾನುವಾರ ರಾತ್ರಿಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರಿ ಪದ್ಮಾವತಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿ ನಿವಾಸದ ಸಿಬ್ಬಂದಿಗಳಲ್ಲಿಯೂ ಸೋಂಕು ಪತ್ತೆಯಾಗಿದೆ.

ಇದರ ನಡುವೆ ಕಳೆದ ಒಂದು ವಾರದಿಂದ ಸಚಿವರು, ಶಾಸಕರು, ಅಧಿಕಾರಿ ವರ್ಗ ಕೊರೊನಾ ನಿಯಂತ್ರಣ ಕುರಿತಂತೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರತಿದಿನ ಒಂದಿಲ್ಲೊಂದು ಸಭೆ ನಡೆಸಿದ್ದರು.

ಹೀಗಾಗಿ ಸಿಎಂ ಯಡಿಯೂರಪ್ಪ ಸಂಪುಟದ ಆರು ಸಚಿವರಿಗೆ ಕೊರೊನಾ ಭೀತಿ ಎದುರಾಗಿದೆ. ಕಳೆದ ವಾರವಷ್ಟೇ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಬಿಎಸ್‍ವೈ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಕೊರೊನಾ ನಿಯಂತ್ರಣ ಹಾಗೂ ಡ್ರಗ್ಸ್ ಹಾವಳಿ ಕುರಿತಂತೆ ರಾಜ್ಯಪಾಲ್ಯರು ಮಾಹಿತಿ ಕೇಳಿದ್ದರು. ಹೀಗಾಗಿ ಅವರಿಗೂ ಕೂಡ ಕೊರೊನಾ ಆತಂಕ ಎದುರಾಗಿದೆ.

ಬಿಎಸ್‍ವೈ ಅವರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಕೋಟಾ ಶ್ರೀನಿವಾಸ್ ಪೂಜಾರಿ, ಶ್ರೀರಾಮುಲು ಅವರುಗಳಿಗೂ ಭೀತಿ ಉಂಟಾಗಿದೆ.

ಈಗಾಗಲೇ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ ಅವರುಗಳು ಸ್ವಯಂ ಕ್ವಾರಂಟೈನ್‍ಗೆ ಒಳಗಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ರಾತ್ರಿ ಯಡಿಯೂರಪ್ಪ ಕಾವೇರಿ ನಿವಾಸದಲ್ಲಿ ಸಚಿವರಾದ ಆರ್.ಅಶೋಕ್, ಸೋಮಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಟಿ.ರೇಣುಕಾಚಾರ್ಯ, ಶಾಸಕರಾದ ಬೆಳ್ಳಿಪ್ರಕಾಶ್, ಅಪ್ಪಚ್ಚುರಂಜನ್, ಹರೀಶ್ ಪೂಂಜಾ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಸೇರಿದಂತೆ ಅನೇಕರು ಭೆಟಿ ಮಾಡಿದ್ದರು.

ಅಲ್ಲದೆ ಕಳೆದ ವಾರ ಯಡಿಯೂರಪ್ಪ ಪ್ರತಿದಿನ ಒಂದಿಲ್ಲೊಂದು ನಿರಂತರವಾಗಿ ಇಲಾಖಾವಾರು ಸಭೆಯನ್ನೂ ನಡೆಸಿದ್ದರು. ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದರು.

ಜುಲೈ 30 ರಂದು ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಶಿವಾಜಿನಗರದಲ್ಲಿ ಆಯೋಜಿಸಲಾಗಿದ್ದ ಮೆಟ್ರೋ ಎರಡನೇ ಹಂತದ ಕಂಟೇನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

ಕಂದಾಯ ಸಚಿವ ಆರ್. ಅಶೋಕ್ ನಗರಾಭಿವೃದ್ಧಿ, ಸಚಿವ ಭೈರತಿ ಬಸವರಾಜ್ ಹಾಗೂ ಹಿರಿಯ ಅಧಿಕಾರಿಗಳು ಮೆಟ್ರೋ ನಿಗಮದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜುಲೈ 31ರಂದು ಕಿಯೋನಿಕ್ಸ್ ವೇರ್ ಹೌಸಿಂಗ್ ಇಂಕ್ಯೂಬೇಶನ್ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳ ಸೌಲಭ್ಯಕ್ಕಾಗಿ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆ ಮಾಡಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಹಿರಿಯ ವಿಜ್ಞಾನಿ ಕಸ್ತೂರಿರಂಗನ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು. ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ಈಗ ಸಿಎಂಗೆ ಸೋಂಕು ತಗುಲಿರುವ ಹಿನ್ನೆಲೆ ಅವರ ಸಂಪರ್ಕದಲ್ಲಿದ್ದ ಸಚಿವರು ಮತ್ತು ರಾಜ್ಯಪಾಲರಿಗೆ ಕ್ವಾರೆಂಟೈನ್ ಆಗುವ ಸಾಧ್ಯತೆ ಇದೆ.
ಇದರ ಜೊತೆಗೆ ಸಿಎಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 14 ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೂ ಆತಂಕ ಉಂಟಾಗಿದೆ.

ಆದರೆ ಅದೃಷ್ಟವಶಾತ್ ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರೂ ಕೋವಿಡ್ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ವೈದ್ಯಕೀಯ ವರದಿಗಳು ಸ್ಪಷ್ಟಪಡಿಸಿವೆ. ಆದಾಗ್ಯೂ ಕೆಲವರು ಅನಿವಾರ್ಯವಾಗಿ ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕಾಗಿದೆ.

ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಯಡಿಯೂರಪ್ಪನವರ ಆರೋಗ್ಯ ಸ್ಥಿರವಾಗಿದೆ. ಕೊರೋನಾ ಪಾಸಿಟಿವ್ ಬಂದಿದ್ದರೂ ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ಆರೋಗ್ಯದ ಬಗ್ಗೆ ಹೆಚ್ಚಿನ ಆತಂಕ ಪಡಬೇಕಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸಿಎಂ ಆರೋಗ್ಯದ ಮೇಲೆ ನಿಗಾ ವಹಿಸಲು ವೈದ್ಯರ ವಿಶೇಷ ತಂಡವನ್ನು ರಚಿಸಲಾಗಿದೆ. ಬಿ.ಎಸ್. ಯಡಿಯೂರಪ್ಪನವರಿಗೆ ಯಾವುದೇ ಗಂಭೀರ ಸಮಸ್ಯೆಗಳು ಇಲ್ಲದ ಕಾರಣ ವಿಶೇಷ ವಾರ್ಡ್‍ಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಗೃಹ ಕಚೇರಿ ಕೃಷ್ಣ, ಅಧಿಕೃತ ನಿವಾಸ ಕಾವೇರಿ, ಸಿಎಂ ನಿವಾಸ ಧವಳಗಿರಿ, ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯನ್ನು ಇಂದು ಸ್ಯಾನಿಟೈಸರ್ ಮಾಡಲಾಗಿದೆ.

Facebook Comments

Sri Raghav

Admin