ಕೊರೋನಾ ಕೇಡುಗಾಲ : ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸಿಎಂ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊರೊನಾ ಸೋಂಕು ತಡೆಯಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ದಾನಿಗಳು ನೆರವಾಗಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದ್ದಾರೆ.

ಈ ಕುರಿತಂತೆ ಪ್ರಕಟಣೆ ಹಾಗೂ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಸಚಿವಾಲಯ,ಸಹೃದಯ ನಾಗರಿಕರೆ,ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ವಿಶ್ವದೆಲ್ಲೆಡೆ ಹರಡುತ್ತಿರುವ ಸಾಂಕ್ರಾಮಿಕ ರೋಗದಿಂದ ಗಣನೀಯ ಪ್ರಮಾಣದಲ್ಲಿ ಜನರು ಸಾವಿಗೀಡಾಗುತ್ತಿದ್ದು, ಈ ಸಾಂಕ್ರಾಮಿಕ ರೋಗವು ಕರ್ನಾಟಕ ರಾಜ್ಯದಲ್ಲೂ ಕಂಡುಬಂದಿದೆ. ಈ ರೋಗವನ್ನು ತಡೆಗಟ್ಟಲು ಸರ್ಕಾರವು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದು, ಈ ವೈರಾಣು ಹರಡುವುದನ್ನು ನಿಯಂತ್ರಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಈ ರೋಗದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ವೈದ್ಯೋಪಚಾರಗಳನ್ನು ಸರ್ಕಾರದ ವತಿಯಿಂದ ಮಾಡಿಸಲಾಗುತ್ತಿದ್ದು, ರೋಗವನ್ನು ಪತ್ತೆ ಹಚ್ಚಲು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಸರ್ಕಾರದ ಕಾರ್ಯತಂತ್ರಗಳನ್ನು ಮನಗಂಡು ಈ ವೈರಾಣು ಹರಡುವುದನ್ನು ತಡೆಗಟ್ಟಲು ತಾವು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಕಾರ್ಯಕ್ಕಾಗಿ ದೇಣಿಗೆ ಸಲ್ಲಿಸಲು ಇಚ್ಛಿಸುವ ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19, ಎಸ್‌ಬಿಐ ವಿಧಾನಸೌಧ ಶಾಖೆ, ಖಾತೆ ಸಂಖ್ಯೆ 39234923151, ಐಎಫ್ಎಸ್ಇ ಕೋಡ್ 0040277ಕ್ಕೆ ದೇಣಿಗೆ ನೀಡಬಹುದು. ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80 ಜಿ (2)ಅಡಿ ತೆರಿಗೆ ವಿನಾಯಿತಿ ಇದೆ ಎಂದು ಸಿಎಂ ಬಿಎಸ್​ವೈ ತಿಳಿಸಿದ್ದಾರೆ.

Facebook Comments

Sri Raghav

Admin