ಬಿಗ್ ನ್ಯೂಸ್ : ಆಪ್ತ ಶಾಸಕರ ಜೊತೆ ಸಿಎಂ ದಿಢೀರ್ ರಹಸ್ಯ ಸಭೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ತಮ್ಮ ನಾಯಕತ್ವದ ಬದಲಾವಣೆ ಕುರಿತಂತೆ ಎದ್ದಿರುವ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ತಡರಾತ್ರಿ ಆಪ್ತ ಶಾಸಕರ ಜೊತೆ ರಹಸ್ಯ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ಅವರ ಜೊತೆ ಸಚಿವರಾದ ಬಸವರಾಜ್ ಬೊಮ್ಮಯಿ, ಆರ್ .ಅಶೋಕ್, ವಿ.ಸೋಮಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಹರೀಶ್ ಪೂಂಜಾ, ಬೆಳ್ಳಿ ಪ್ರಕಾಶ್, ಅಪ್ಪಚ್ಚು ರಂಚನ್, ಸೇರಿದಂತೆ ಸುಮಾರು 16 ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಸಭೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

ಮೇಲ್ನೋಟಕ್ಕೆ ಇದೊಂದು ಸೌರ್ಹದವಾದ ಸಭೆ ಎಂದು ಹೇಳಲಾಗಿದ್ದರೂ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಮಾತುಕತೆ ನಡೆಸಿರುವ ಯಡಿಯೂರಪ್ಪ , ತಮ್ಮ ನಾಯಕತ್ವಕ್ಕೆ ಬೆಂಬಲ ಗಿಟ್ಟಿಸಲು ಶಾಸಕರ ಜೊತೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಕೇಂದ್ರ ಬಿಜೆಪಿ ವರಿಷ್ಡರು ತಮ್ಮ ನಿರ್ಧಾರಕ್ಕೆ ವಿರುದ್ದವಾಗಿ ನಾಯಕತ್ವ ಬದಲಾವಣೆ ಮಾಡಲು ಮುಂದಾದರೆ, ಸಡ್ಡು ಹೊಡೆಯುವ ಉದ್ದೇಶದಿಂದಲೇ ಶಾಸಕರ ಸಭೆ ಕರೆದಿದ್ದರು ಎನ್ನಲಾಗಿದೆ. ಜೊತೆಗೆ ಬಿಎಸ್ ವೈ ಅವರೇ ಖುದ್ದು ಕೆಲವು ಶಾಸಕರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ.

ಮುಖ್ಯವಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಬಳ್ಳಾರಿ, ‌ರಾಯಚೂರು,ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿನ ಶಾಸಕರಿಗೆ ಕರೆ ಮಾಡಿ ಸಹಕಾರ ಕೋರಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವಾಸ ಗಳಿಸುವ ಯತ್ನಇನ್ನು ಸಭೆಯಲ್ಲಿ ಯಡಿಯೂರಪ್ಪ ,ಕಳೆದ ಒಂದು ವರ್ಷದಲ್ಲಿ ನಡೆದಿರುವ ಕಹಿ ಘಟನೆಗಳನ್ನು ಮರೆತಬಿಡುವಂತೆ ಕಿವಿಮಾತು ಹೇಳಿದ್ದಾರೆ.

ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ,ಪ್ರವಾಹ,ಸಂಪುಟ ವಿಸ್ತರಣೆ, ಉಪಚುನಾವಣೆ, ಕೋವಿಡ್ ನಿಯಂತ್ರಣ ಸೇರಿದಂತೆ ಮತ್ತಿತರ ಕೆಲಸದ ಕಡೆ ಗಮನ ಕೊಟ್ಟ ಪರಿಣಾಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.ಮುಂದೆ ಇಂತಹ ಪ್ರಮಾದಗಳು ನಡೆಯದಂತೆ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದಾರೆ.

ಕ್ಷೇತ್ರದಲ್ಲಿ ಯಾವುದೇ ಕೆಲಸಗಳು, ಅಧಿಕಾರಗಳ ವರ್ಗಾವಣೆ , ಅನುದಾನ ಬಿಡುಗಡೆ ಸೇರಿದಂತೆ ಮತ್ತಿತರ ಕೆಲಸ ಕಾರ್ಯಕ್ಕೆ ತಮ್ಮನ್ನು ನೇರವಾಗಿ ಸಂಪರ್ಕ ಮಾಡುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಗೆ ರಾಜೀನಾಮೆ ಕೊಟ್ಟು ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡಿದ್ದರಿಂದ  ಮೂಲ ಬಿಜೆಪಿಯವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಲಿಲ್ಲ ಎಂಬ ನೋವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಹೆಸರು ಬಹಿರಂಗ ಪಡೆಸಲು ಇಚ್ಛಸದ  ಮುಖ್ಯಮಂತ್ರಿಗಳ ಆಪ್ತರೊಬ್ಬರು ತಿಳಿಸಿರುವಂತೆ   ನಾಯಕತ್ವ ಬದಲಾವಣೆಯ ಕೂಗು ಎದ್ದರೆ, ತಮಗೂ ದೊಡ್ಡ ಸಂಖ್ಯೆಯಲ್ಲಿ ಶಾಸಕರ ಬೆಂಬಲವಿದೆ ಎಂಬುದನ್ನು ವರಿಷ್ಟರ ಮುಂದೆ ತೋರಿಸಲು ಸಭೆ ನಡೆಸಿದ್ದಾರೆ.ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲರೂ ಯಡಿಯೂರಪ್ಪ ನಾಯಕತ್ವಕ್ಕೆ ಅಚಲ ವಿಶ್ವಾಸ ತೋರಿಸಿದ್ದೇವೆ ಎಂದು ಹೇಳಿದರು.

ಮೂರು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ದೆಹಲಿ ಪ್ರವಾಸ ಈಗ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲ ಸೃಷ್ಟಿಸಿತ್ತು. ಜೊತೆಗೆ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಶುಭ ಹಾರೈಸದೆ ಇರುವುದು ಯಡಿಯೂರಪ್ಪ ಅವರಲ್ಲಿಆತಂಕ ಮೂಡಿಸಿದೆ.

# ​ಬಿಎಸ್‌ವೈಗೆ ಪರ್ಯಾಯ ಯಾರು?
ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಅಷ್ಟು ಸರಳವಲ್ಲ ಎಂಬ ಅರಿವು ಇರುವುದರಿಂದ ನಾಯಕತ್ವ ಬದಲಾವಣೆಗೆ ಕೈ ಹಾಕಿದರೆ ಪಕ್ಷ ಹೋಳಾಗಬಹುದೆಂಬುದು ಕೇಂದ್ರ ವರಿಷ್ಠರನ್ನು ಕಾಡುತ್ತಿದೆ.

ಸದ್ಯ ರಾಜ್ಯ ಲಿಂಗಾಯತ ಸಮುದಾಯದ ಅನಭಿಷಕ್ತ ಚಕ್ರವರ್ತಿ ರೀತಿ ಯಡಿಯೂರಪ್ಪ ಮುಂದುವರಿದಿದ್ದಾರೆ. ಇತ್ತೀಚಿಗೆ ನಡೆದ 15 ವಿಧಾನ ಸಭಾ ಕ್ಷೇತ್ರಗಳ ಗೆಲುವೇ ಇದಕ್ಕೆ ಇತ್ತೀಚಿನ ಉದಾಹರಣೆ. ಇದರ ಅರಿವು ಹೈ ಕಮಾಂಡ್‍ಗೆ ಚೆನ್ನಾಗಿ ಇದೆ.

ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಬಹುದು ಎಂಬ ಆತಂಕವೂ ಇದೆ. ಯಡಿಯೂರಪ್ಪ ನಂತರ ಯಾರು ಎನ್ನುವ ಪ್ರಶ್ನೆ ಎದ್ದಾಗಲೆಲ್ಲಾ ಈಗಾಗಲೇ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಹೆಸರು ಕೇಳಿ ಬರುತ್ತಿತ್ತು. ಆದರೆ,ಶೆಟ್ಟರ್ ನಾಯಕತ್ವ ವಹಿಸಿಕೊಳ್ಳುವ ಪ್ರಯತ್ನದಿಂದ ದೂರವಿದ್ದು ತಟಸ್ಥವಾಗಿ ಉಳಿದಿದ್ದಾರೆ.

ಒಂದು ವೇಳೆ ಬಿಎಸ್‌ ಯಡಿಯೂರಪ್ಪ ನಾಯಕತ್ವ ಬದಲಾದರೆ ಪರ್ಯಾಯ ಯಾರು ಎಂಬ ಪ್ರಶ್ನೆಯೂ ಉದ್ಭವಾಗುತ್ತದೆ. ಲಕ್ಷ್ಮಣ ಸವದಿ ಹೆಸರು ಕೇಳಿಬರುತ್ತಿದ್ದರೂ ಪಕ್ಷದ ಶಾಸಕರಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿಲ್ಲ. ಅದರಲ್ಲೂ ವಲಸೆ ಬಂದವರಲ್ಲಿ ಕೆಲವರಿಗೆ ಸವದಿ ಬಗ್ಗೆ ಭಿನ್ನಾಭಿಪ್ರಾಯಗಳಿವೆ.

ಆದರೆ ಸವದಿ ಹೈಕಮಾಂಡ್‌ ಜೊತೆಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಜೊತೆಗೂ ಉತ್ತಮ ನಂಟಿದೆ. ಅವರ ಹೊರತಾಗಿ ಪ್ರಹ್ಲಾದ್ ಜೋಶಿ ಹೆಸರೂ ಕೇಳಿಬರುತ್ತಿದೆ.

ಪ್ರಹ್ಲಾದ್‌ ಜೋಶಿ ಇತ್ತೀಚೆಗೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಹಾಗೂ ಕೆಲವೊಂದು ಶಾಸಕರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಸಿಎಂ ಬಿಎಸ್‌ ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದವರು. ಕರ್ನಾಟಕದಲ್ಲಿ ಕಮಲ ಪಕ್ಷಕ್ಕೆ ಪ್ರಬಲ ನಾಯಕತ್ವ ನೀಡಿ ಅಧಿಕಾರಕ್ಕೆ ತಂದರೂ ಇದೀಗ ಅವರ ನಾಯಕತ್ವದ ಬಗ್ಗೆಯೇ ಅಪ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಬಿಎಸ್‌ವೈ ವಯಸ್ಸು ಹಾಗೂ ಕೋವಿಡ್‌ ನಿರ್ವಹಣೆಯನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆ ಅಗತ್ಯ ಎಂಬ ವಾದಗಳು ಪಕ್ಷದ ಆಂತರಿಕ ವಲಯದಲ್ಲಿವೆ.

ಸದ್ಯ ರಾಜ್ಯ ಸರ್ಕಾರದ ವೈಫಲ್ಯತೆ, ಆಪರೇಷನ್ ಕಮಲ, ಕೋವಿಡ್‌ ನಿರ್ವಹಣೆ ಜನರಲ್ಲಿ ಸರ್ಕಾರದ ಬಗ್ಗೆ ಅಭಿಪ್ರಾಯ ಬದಲಾವಣೆಗೆ ಕಾರಣವಾಗಿದೆ. ಇನ್ನುಳಿದ ಅವಧಿಯಲ್ಲೂ ಸರ್ಕಾರದ ತಪ್ಪುಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಅಭಿಪ್ರಾಯ ರೂಪಿಸಲು ವಿರೋಧ ಪಕ್ಷಗಳೂ ಸಜ್ಜಾಗಿವೆ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ.

ವಯಸ್ಸು, ಕೋವಿಡ್‌ ನಿರ್ವಹಣೆ ಕಾರಣ ನೀಡಿ ಬಿಎಸ್‌ವೈಯನ್ನು ಪಟ್ಟದಿಂದ ಇಳಿಸುವುದು ಕೇವಲ ಬಹಿರಂಗವಾಗಿ ವ್ಯಕ್ತವಾಗುತ್ತಿರುವ ಕಾರಣವಷ್ಟೇ. ಆಂತರಿಕವಾಗಿ ಇದರ ಹಿಂದೆ ಬೇರೆ ಉದ್ದೇಶಗಳು ಇವೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ನಿಜ. ಆದರೆ ದೆಹಲಿ, ಕೇರಳ ಹೊರತಾಗಿ ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಹೀಗೆಯೇ ಇದೆ.

ದೇಶದಲ್ಲೇ ಕೋವಿಡ್ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಇದು ಕೇವಲ ನೆಪವಷ್ಟೇ ಎಂಬುವುದು ಬಿಎಸ್‌ವೈ ಆಪ್ತರ ವಾದ. ಬದಲಾಗಿ ಬಿಎಸ್‌ವೈ ವಿರುದ್ಧ ಅಸಂತೋಷಗೊಂಡಿರುವ ಬಣ ಈ ಚರ್ಚೆಯನ್ನು ಹುಟ್ಟುಹಾಕಿದೆ ಎಂಬ ಮಾತು ಬಿಎಸ್‌ವೈ ಬಣದಿಂದ ಕೇಳಿಬರುತ್ತಿದೆ. ದೆಹಲಿಯಲ್ಲಿ ಕೂತಿರುವ ಕರ್ನಾಟಕ ಬಿಜೆಪಿಯ ಮತ್ತೊಂದು ಶಕ್ತಿ ಕೇಂದ್ರ ಈ ಎಲ್ಲಾ ಬೆಳವಣಿಗೆಯ ಹಿಂದೆ ಇದೆ ಎಂದು ಹೇಳುತ್ತಿವೆ ಬಿಎಸ್‌ವೈ ಆಪ್ತ ಮೂಲಗಳು.

ರಾಜ್ಯದಲ್ಲಿ ಕಮಲ ಪಕ್ಷವನ್ನು ಕಟ್ಟು ಬೆಳೆಸುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಇದೀಗ ಇತರ ಪಕ್ಷಗಳಿಂದ ವಲಸೆ ಬಂದವರು ಬಿಎಸ್‌ವೈ ಜೊತೆಗೆ ಇರುವುದರಿಂದ ಅವರ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಅವರ ಹಿಂದೆ ಲಿಂಗಾಯತ ಸಮುದಾಯ ಇರುವುದರಿಂದ ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ಕೈಗೊಳ್ಳುವಾಗ ಯೋಚನೆ ಮಾಡಲೇ ಬೇಕಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಮಾಡಿದರೆ ಅದು ಬೇರೆಯದ್ದೇ ಸಂದೇಶವನ್ನು ನೀಡಲಿದೆ. ಇದು ಕಮಲದ ಪಾಲಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಸುಲಭದ ಮಾತಲ್ಲ ಎಂಬ ಅಭಿಪ್ರಾಯಗಳು ಬಲವಾಗಿವೆ.

ಅದೇನೇ ಇದ್ದರೂ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುವುದು ಸದ್ಯದ ಕುತೂಹಲ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಸ್ಥಾನಕ್ಕೆ ಉತ್ತರಾಧಿಕಾರಿಯ ಚರ್ಚೆ ಆರಂಭಗೊಂಡಿರುವುದಂತೂ ಸತ್ಯ. ಆದರೆ, ಯಾರು ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ.

Facebook Comments

Sri Raghav

Admin