ಕೊರೊನಾ 2.0 ಭೀತಿ : ಪರಸ್ಥಿತಿ ಎದುರಿಸಲು ಸಜ್ಜಾಗುವಂತೆ ಆಸ್ಪತ್ರೆಗಳಿಗೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.24- ಕೋವಿಡ್‍ನ 2ನೇ ಅಲೆ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಆಸ್ಪತ್ರೆಗಳು ಸಜ್ಜಾಗಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಮಾದರಿ ಪ್ರಾಥಮಿಕ ಆರೋಗ್ಯ
ಕೇಂದ್ರದ ಪ್ರಾತ್ಯಕ್ಷಿಕೆ ಮತ್ತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೃಷ್ಟಿಯಿಂದ ಉತ್ತಮ ಆರೋಗ್ಯ ಸೇವೆಗಳು ಎಲ್ಲಾ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ದೊರಕುವಂತಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಾದರಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಚಿಂತನೆ ನಡೆದಿದ್ದು,ಹೀಗಾಗಿ ರಾಜ್ಯಾದ್ಯಂತ ಆರೋಗ್ಯ ಕೇಂದ್ರಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಾದರಿ ಆರೋಗ್ಯ ಕೇಂದ್ರಗಳು 6ರಿಂದ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಬಜೆಟ್‍ನಲ್ಲಿ ಈ ಯೋಜನೆಗೆ ಹೆಚ್ಚು ಹಣ ಒದಗಿಸಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಆದ್ಯತೆ ಹಾಗೂ ಕೋವಿಡ್ ಚಿಕಿತ್ಸೆಗೆ ಪೂರಕ ಸಲಕರಣೆ ಮತ್ತು ಔಷಧಿಗಳ ಪೂರೈಕೆಯಾಗಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಆರೋಗ್ಯ ಉಪಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿದ್ದು, ಅಗತ್ಯ ಸೌಕರ್ಯಗಳು ದೊರಕುವಂತಿದ್ದರೆ ಜಿಲ್ಲಾ ಆಸ್ಪತ್ರೆಗಳಿಗೆ ಹೆಚ್ಚಿನ ಸೇವೆಗೆಂದು ಅಲೆಯುವುದು ತಪ್ಪಿದಂತಾಗುತ್ತದೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಉತ್ತಮ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.

ಪ್ರಾಥಮಿಕ ಆರೋಗ್ಯ ಸೇವೆ ಕಾರ್ಯಕ್ರಮ ಸರ್ಕಾರದ 20 ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರ ಪ್ರಸ್ತುತ 15 ಜಿಲ್ಲಾಸ್ಪತ್ರೆಗಳು, 18 ಇತರೆ ಆಸ್ಪತ್ರೆಗಳು, 207 ಸಮುದಾಯ ಆರೋಗ್ಯ ಕೇಂದ್ರಗಳು, 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8871 ಉಪಕೇಂದ್ರಗಳು ಮತ್ತು 146 ತಾಲ್ಲೂಕು ಆಸ್ಪತ್ರೆಗಳ ಮೂಲಕ ಆರೋಗ್ಯ ಸೌಲಭ್ಯ ಒದಗಿಸುತ್ತಿದೆ.

ಈ ಸೇವೆಗಳ ಮೂಲಕ ಜನಸಮುದಾಯಕ್ಕೆ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ಕ್ಷೇತ್ರ ಸರ್ಕಾರದ ಆದ್ಯತಾ ವಲಯಗಳಲ್ಲಿ ಒಂದು. ಸರ್ವರಿಗೂ ಆರೋಗ್ಯ ಕಲ್ಪಿಸುವುದು ನಮ್ಮ ಆಶಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ರಕ್ಷಣಾ ಸೇವೆ ತಲುಪಿಸುವ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಅನುಕೂಲ ಮಾಡುವುದು ಸರ್ಕಾರದ ಧ್ಯೇಯ ಎಂದರು.

ಇಂತಹ ಸೇವೆಯನ್ನು ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಎಂಬಿಬಿಎಸ್ ಮಾಡಿದವರು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಕೆಲಸ ಮಾಡಬೇಕು. ಈಗಾಗಲೇ ಈ ಬಗ್ಗೆ ಸರ್ಕಾರ ಆದೇಶ ಮಾಡಿದೆ. ಇದರಿಂದ ಮುಂದೆ ವೈದ್ಯರ ಕೊರತೆಯೂ ಆಗುವುದಿಲ್ಲ. ವೈದ್ಯರ ಸೇವೆ ಮೂಲಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆ ಇಲ್ಲದೆ ಕಾರಣ ವೈದ್ಯರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ವ್ಯವಸ್ಥೆ ಕೂಡ ಮಾಡಲಾಗುತ್ತದೆ.

Facebook Comments