ಅಮೆರಿಕದಲ್ಲಿರುವ ಕನ್ನಡಿಗರಿಗೆ ಅಭಯ ನೀಡಿದ ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.13- ಅಮೆರಿಕದಲ್ಲಿರುವ ಕನ್ನಡಿಗರು ಭಾರತದಲ್ಲಿರುವ ತಮ್ಮ ಬಂಧುಗಳ ಬಗ್ಗೆ ಚಿಂತನೆ ಮಾಡುವ ಅಗತ್ಯವಿಲ್ಲ. ನಾವು ಶಕ್ತಿಮೀರಿ ಎಲ್ಲರನ್ನೂ ರಕ್ಷಣೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಉತ್ತರ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡಿದ ಬಿಎಸ್‍ವೈ, ಉತ್ತರ ಅಮೆರಿಕಾದಲ್ಲಿ ಕೊರೋನದಿಂದಾಗಿ ಕನ್ನಡಿಗರ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಪಡೆದರಲ್ಲದೆ, ಕೊರೋನಾ ವೈರಸ್ ತಗುಲದಂತೆ ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಮೇರಿಕಾದ ಕನ್ನಡಿಗರಿಗೆ ಧೈರ್ಯ ತುಂಬಿದರು.

ಅಮೆರಿಕಾದಲ್ಲಿರುವ ಅಕ್ಕ ಬಳಗದವರಿಗೆ ನಮ್ಮ ದೇಶದಲ್ಲಿ ಕೊರೋನಾ ಹತೋಟಿಯಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡಿರುವ ಕ್ರಮಗಳಿಂದಾಗಿ ರೋಗ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿರುವ ಯಾರಿಗಾದರೂ ನಿಮ್ಮ ಬಂಧುಗಳಿಗೆ ತೊಂದೆಯಾದರೆ ತಕ್ಷಣ ಮಾಹಿತಿ ನೀಡಿದರೆ ಅವರ ಸಂಕಷ್ಟಕ್ಕೆ ಸ್ಪಂದಿಸಲಾಗುವುದು.

ನೇರವಾಗಿ ನಮ್ಮನ್ನು ಸಂಪರ್ಕಿಸಬಹುದು ಸಹಾಯ ಮಾಡುತ್ತೇವೆ ಎಂಬ ಅಭಯವನ್ನು ಮುಖ್ಯಮಂತ್ರಿ ನೀಡಿದರು. ಅಮೆರಿಕದಲ್ಲಿರುವ ಕನ್ನಡಿಗರ ಸ್ಥಿತಿಗತಿಯ ಬಗ್ಗೆ ಅಕ್ಕ ಬಳಗದವರು ಮಾಹಿತಿ ನೀಡಿ ಇಲ್ಲಿನ ಬಂಧುಗಳಲ್ಲಿರುವ ಆತಂಕವನ್ನು ದೂರಮಾಡಿ ಎಂಬ ಸಲಹೆ ನೀಡಿದರು.

ರಾಜ್ಯದಲ್ಲಿ ನಿನ್ನೆವರೆಗೆ 232 ಕೊರೋನಾ ಸೋಂಕು ದೃಡಪಟ್ಟಿದ್ದು, 54 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದು, ಉಳಿದ 172 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.ವಿಶ್ವದ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಈ ರೋಗ ನಿಯಂತ್ರಣದಲ್ಲಿದೆ ಪ್ರಧಾನಿಯವರು ಲಾಕ್ಡೌನ್ ಘೋಷಿಸಿದ್ದರಿಂದ ಹತೋಟಿ ಸಾಧ್ಯವಾಯಿತು.

ಏ.14ರ ನಂತರ ಲಾಕ್ಡೌನ್ ಸಡಿಲ ಮಾಡುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿಗೆ ಧಕ್ಕೆ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿಯವರು ಲಾಕ್ ಡೌನ್ ಸಡಿಲ ಮಾಡುವ ಸಾಧ್ಯತೆ ಎಂದರು.ಅಮೆರಿಕಾದಲ್ಲಿ ಈ ರೋಗದ ಹಾವಳಿ ದೊಡ್ಡ ಪ್ರಮಾಣದಲ್ಲಿದೆ. ಅಲ್ಲಿನ ಪ್ರತಿಯೊಬ್ಬ ಪ್ರಜೆ ಹಾಗೂ ಕನ್ನಡಿಗರ ಆರೋಗ್ಯ ಮುಖ್ಯ.

ಈ ರೋಗದ ಕೈಗೆ ಸಿಗದಂತೆ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ರೋಗಕ್ಕೆ ಔಷಧಿ ಇಲ್ಲದಿರುವುದರಿಂದ ಯಾರು ಕೂಡ ಮನೆಯಿಂದ ಹೊರ ಬರಬಾರದು. ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯವಾಗಿರಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ, ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಅಕ್ಕ ಒಕ್ಕೂಟದ ರುವಾರಿ ಅಮರನಾಥಗೌಡ, ಅಕ್ಕ ಅಧ್ಯಕ್ಷರಾದ ತುಮಕೂರು ದಯಾನಂದ್, ಕಾರ್ಯದರ್ಶಿ ವಿನೋದ್, ಪ್ರಭುದೇವ ಉಪಸ್ಥಿತರಿದ್ದರು.

Facebook Comments

Sri Raghav

Admin