ಕಂಟ್ರೋಲ್ ತಪ್ಪಿದ ಕೊರೋನಾ, ಸೋಮವಾರ ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.11-ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

ಸದ್ಯ ಹೋಂ ಕ್ವಾರಂಟೈನ್‍ಗೆ ಒಳಗಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆಯುವರು.

ಈಗಾಗಲೇ ಮುಖ್ಯ ಕಾರ್ಯದರ್ಶಿಗಳ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಲಾಗಿದ್ದು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುವ ವೇಳೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

ಆಯಾ ಜಿಲ್ಲೆಯಲ್ಲಿ ಈವರೆಗೂ ಬಂದಿರುವ ಒಟ್ಟು ಕೊರೊನಾ ಪಾಸಿಟಿವ್ ಸಂಖ್ಯೆಗಳು, ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರು, ಸಕ್ರಿಯ ಪ್ರಕರಣಗಳು, ಸಾವಿನ ಸಂಖ್ಯೆ, ಆಸ್ಪತ್ರೆಗಳ ಸ್ಥಿತಿಗತಿ, ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆ ಸಾಮಥ್ರ್ಯ, ವೆಂಟಿಲೇಟರ್, ವೈದ್ಯಕೀಯ ಪರಿಕರಗಳು ಸೋಂಕು ಹರಡಲು ಕಾರಣ ಸೇರಿದಂತೆ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಲಾಕ್‍ಡೌನ್‍ಗೂ ಮುನ್ನ ಜಿಲ್ಲೆಯಲ್ಲಿದ್ದ ಒಟ್ಟು ಪ್ರಕರಣಗಳು, ಅನ್‍ಲ್ಯಾಕ್‍ನಂತರ ಬಂದಿರುವ ಸೋಂಕು ಪ್ರಕರಣಗಳು, ಹೊರಗಿನವರಿಂದ ಬಂದವರಿಂದಲೇ ಸೋಂಕು ಹಬ್ಬಿದೆಯೋ, ರೋಗಿಯ ಪ್ರಯಾಣಗಳ ವಿವರ, ಜಿಲ್ಲಾಡಳಿತ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳು ಇತ್ಯಾದಿಗಳ ಬಗ್ಗೆ ಮುಖ್ಯಮಂತ್ರಿಯವರು ಮಾಹಿತಿ ಪಡೆದುಕೊಳ್ಳುವರು.

ವಿಡಿಯೋ ಕಾನ್ಫರೆನ್ಸ್ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ಒದಗಿಸಬೇಕೆಂದು ಸೂಚಿಸಲಾಗಿದೆ.

ಈಗಾಗಲೇ ಕಾವೇರಿಯಲ್ಲಿ ಇದಕ್ಕಾಗಿ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದ್ದು, ಮುಖ್ಯಮಂತ್ರಿಗಳು ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ಕೊಡಲಾಗಿದೆ.

ಭಾನುವಾರ ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಸಾರ್ವಜನಿಕರ ಸ್ಪಂದೆ ವಿಶೇಷವಾಗಿ ಈ ದಿನದಂದೇ ಪತ್ತೆಯಾಗಿರುವ ಸೋಂಕು ಪ್ರಕರಣಗಳು, ಲಾಕ್‍ಡೌನ್ ವಿಸ್ತರಣೆ ಮಾಡಬೇಕೆ? ಯಥಾಸ್ಥಿತಿಯನ್ನೇ ಮುಂದುವರೆಸಬೇಕೆ ಎಂಬ ಮಹತ್ವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಬೆಂಗಳೂರು ನಗರ, ಬಳ್ಳಾರಿ, ಬೀದರ್, ದಕ್ಷಿಣ ಕನ್ನಡ, ಯಾದಗಿರಿ, ಬಿಜಾಪುರ, ಬೀದರ್ ಸೇರಿದಂತೆ ಕೊರೊನಾ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ವಿಶೇಷ ನಿಗಾವಹಿಸುವಂತೆ ಸಿಎಂ ಸೂಚನೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin