ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ಮಲೆನಾಡಿನ ಹೆಬ್ಬಾಗಿಲು, ಸಹ್ಯಾದ್ರಿ ಪರ್ವಗಳ ತವರೂರು ಶಿವಮೊಗ್ಗ ಜಿಲ್ಲೆ ಜನತೆಯ ದಶಕಗಳ ಕನಸು ಇಂದು ಕೊನೆಗೂ ನನಸಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರಬೇಕೆಂಬ ಬಹದಿನಗಳ ಕನಸನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಕಾಮಾಗಾರಿಗೆ ಆನ್ ಲೈನ್ ಮೂಲಕ ಚಾಲನೆ ನೀಡುವ ಮೂಲಕ ನನಸು ಮಾಡಿದರು.

ಒಂದು ವೇಳೆ ನಿಗಧಿತ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ಸಹಾಯಕವಾಗಲಿದೆ.

ವಿಮಾನದಲ್ಲಿ ಹಾರಾಟ ನಡೆಸಬೇಕು ಎಂದು ಮಲೆನಾಡಿನ ಜನರ ದಶಕಗಳ ಕನಸು ನನಸಾಗಲಿದೆ. ಸದ್ಯ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಸ್ಥಳಕ್ಕೆ ಹೋಗದೆ, ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಆನ್ ಲೈನ್ ಮೂಲಕವೇ ಕಾಮಗಾರಿಯ ಉದ್ಗಾಟನೆಯನ್ನು ನೇರವೇರಿಸಿದರು.

ಶಿವಮೊಗ್ಗ ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಜಾಗದಲ್ಲಿ ಕೆಲಸವು ಈಗಾಗಲೇ ಆರಂಭವಾಗಿದೆ. ನಿಲ್ದಾಣದ ನಿಗದಿತ ಸ್ಥಳದಲ್ಲಿ ಈಗಾಗಲೇ ಜೆಸಿಬಿ ಯಂತ್ರಗಳು ಕಾರ್ಯಾಚರಣೆ ಆರಂಭಿಸಿವೆ.ವಿಮಾನ ನಿಲ್ದಾಣದ ಕಾಂಪೌಂಡ್, ಕಟ್ಟಡಗಳು, ರನ್ ವೇ ನಿರ್ಮಾಣ ಕಾರ್ಯ ನಡೆಯುತ್ತಿದೆ. ತೀರ್ಥಹಳ್ಳಿಯ ನ್ಯಾಷನಲ್ ಕನ್ಸ್ಟ್ರಕ್ಷನ್ ಕಂಪನಿಗೆ ಈ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿದೆ.

ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ಒದಗಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಟೆಂಡರ್ ಪಡೆದುಕೊಂಡಿದ್ದ ಕಂಪನಿ ಹಲವು ಹಗರಣಗಳಲ್ಲಿ ಸಿಲುಕಿದ್ದರಿಂದ, ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈಗ ಪುನಃ ಕಾಮಗಾರಿ ಪುನಾರಂಭವಾಗುತ್ತಿದೆ.

ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಟೆಂಡರ್ ಕರೆಯಲಾಗಿತ್ತು. ಸಿವಿಲ್ ಮತ್ತು ಟೆಕ್ನಿಕಲ್ ಕೆಲಸಗಳನ್ನು ಒಟ್ಟಾಗಿ ಸೇರಿಸಿ ಟೆಂಡರ್ ಕರೆಯಲಾಗಿತ್ತು. ಆದರೆ ದೊಡ್ಡ ಮೊತ್ತವಾಗಿದ್ದರಿಂದ ಯಾವುದೆ ಕಂಪನಿ ಮುಂದೆ ಬಂದಿರಲಿಲ್ಲ. ಹಾಗಾಗಿ ಸಿವಿಲ್ ಕಾಮಗಾರಿ ಮತ್ತು ಟೆಕ್ನಿಕಲ್ ಕೆಲಗಳನ್ನು ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು. ಈಗ ಕಾಮಗಾರಿ ಆರಂಭವಾಗಿದೆ.

ಸದ್ಯ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 120 ಕೋಟಿ ರೂ. ವೆಚ್ಚದಲ್ಲಿ ರನ್ ವೇ, ಕಾಂಪೌಂಡ್ ಸೇರಿದಂತೆ ಸಿವಿಲ್ ಕೆಲಸಗಳು ಆಗಲಿವೆ. ಈ ಹಿಂದೆ 1200 ಮೀಟರ್ ರನ್ ವೇ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಆದರೆ ಈಗ 1900 ಮೀಟರ್ಗೆ ಹೆಚ್ಚಿಸಲಾಗಿದೆ. ಈ ಕಾಮಗಾರಿಗಳು ಮುಗಿಯುವ ವೇಳೆ ಎರಡನೇ ಹಂತದಲ್ಲಿ ಟೆಕ್ನಿಕಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಲು ರನ್ ವೇ ಉದ್ದವನ್ನು 1.20 ಕಿ.ಮೀ.ನಿಂದ 2.10 ಕಿ.ಮೀ.ಗೆ ವಿಸ್ತರಣೆ ಮಾಡುವುದು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲು ತೀರ್ಮಾನಿಸಲಾಗಿದೆ.

# ಏನೇನು ಇರಲಿದೆ?
ಮೊದಲ ಹಂತದಲ್ಲಿ30 ಅಗಲ ಮತ್ತು 2050 ಮೀ. ಉದ್ದದ ರನ್ ವೇ, 25 ಮೀ. ಅಗಲ ಮತ್ತು 184 ಮೀ. ಉದ್ದದ ಪ್ರತ್ಯೇಕ ಟ್ಯಾಕ್ಸಿ ವೇ ಮತ್ತು ಐಸೋಲೇಷನ್ ವೇ, 18 ಮೀ. ಅಗಲ ಮತ್ತು 862 ಮೀ. ಉದ್ದದ ಸಂಪರ್ಕ ರಸ್ತೆ, 2 ಮೀ ಎತ್ತರ ಮತ್ತು 14,557 ಮೀ. ಉದ್ದ ಕಾಂಪೌಂಡ್ ಹಾಗೂ ಟರ್ಮಿನಲ್ ಬಿಲ್ಡಿಂಗ್, ಪಾರ್ಕಿಂಗ್ ತಾಣ ನಿರ್ಮಿಸಲಾಗುತ್ತದೆ.

ವಿಮಾನ ನಿಲ್ದಾಣಕ್ಕಾಗಿ 168.12 ಎಕರೆ ಖಾಸಗಿ ಸಾಗುವಳಿ ಭೂಮಿ ಮತ್ತು 611.10 ಎಕರೆ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಗಿತ್ತು. ಬಗರ್ ಹುಕುಂ ಸಾಗುವಳಿದಾರರಿಗೆ ಎಕರೆಗೆ ತಲಾ 2 ಲಕ್ಷ ರೂ. ಮತ್ತು ಖಾಸಗಿ ಭೂಮಿಗೆ ಎಕರೆಗೆ 6ರಿಂದ 7 ಲಕ್ಷ ರೂ. ನಂತೆ 18.39 ಕೋಟಿ ರೂ. ಪರಿಹಾರ ನೀಡಲಾಗಿತ್ತು.

2010ರಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕನಸು ಚಿಗುರೊಡೆದಿತ್ತು. ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರದ ಒಪ್ಪಿಗೆ ಸಿಕ್ಕಿತ್ತು. 758 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಯಿತು. 201 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಭೂ ಮಾಲೀಕರಿಗೆ ಪ್ರತಿ ಎಕರೆಗೆ 3 ಲಕ್ಷದಂತೆ ಪರಿಹಾರ ನೀಡಲಾಗಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಬಿ. ಎಸ್. ಯಡಿಯೂರಪ್ಪ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದರು. ವಿಮಾನಯಾನ ಖಾತೆ ರಾಜ್ಯ ಸಚಿವ, ದಾವಣಗೆರೆ ಸಂಸದರಾಗಿದ್ದ ಜಿ. ಎಂ. ಸಿದ್ದೇಶ್ವರರನ್ನು ಸ್ಥಳಕ್ಕೆ ಕರೆತಂದರು. ಅಧಿಕಾರಗಳ ಸರಣಿ ಸಭೆ ನಡೆಸಿದರು. ಆದರೆ, ರಾಜ್ಯ ಸರ್ಕಾರ ಯೋಜನೆಗೆ ಆಸಕ್ತಿ ತೋರಲಿಲ್ಲ. ಆದ್ದರಿಂದ, ಕಾಮಗಾರಿಯೂ ಪುನಃ ಆರಂಭವಾಗಲಿಲ್ಲ.

ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಯೋಜನೆಗೆ ಮತ್ತೆ ಜೀವ ಬಂದಿತು.ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಹೊಣೆಯನ್ನು ನೀಡಲಾಗಿದ. ಕಾಮಗಾರಿಗೆ ವೆಚ್ಚಕ್ಕಾಗಿ 39 ಕೋಟಿ ರೂ.ಗಳನ್ನು ಪ್ರಾರಂಭಿಕವಾಗಿ ಬಿಡುಗಡೆ ಮಾಡಲಾಗಿದೆ.

ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments