ಬಿಜೆಪಿಯಲ್ಲಿ ಜೋರಾಯ್ತು ಹೊಸ ಸಿಎಂ ಚರ್ಚೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ ತೆರವಾಗಲಿರುವ ಈ ಸ್ಥಾನಕ್ಕೆ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದೆ. ಇದೇ 26ರಂದು ಸಿಎಂ ಬಿಎಸ್‍ವೈ ಅವರು ಸಂಜೆ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೋಟ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ನೀವೇ ಮುಂದುವರೆಯಬೇಕೆಂದು ರಾಜ್ಯಪಾಲರು ಅವರಿಗೆ ನಿರ್ದೇಶನ ನೀಡುವರು. ಬಳಿಕ ಶಾಸಕಾಂಗ ಸಭೆ ನಡೆದು ಹೊಸ ನಾಯಕನ ಆಯ್ಕೆ ಪ್ರಕ್ರಿಯೆಗೆ ಹೈಕಮಾಂಡ್ ಚಾಲನೆ ನೀಡಲಿದೆ. ಈಗ ಎಲ್ಲರ ಮುಂದೆ ಇರುವ ಒಂದೇ ಪ್ರಶ್ನೆಯೆಂದರೆ ಯಡಿಯೂಪ್ಪ ನಂತರ ಈ ಸ್ಥಾನಕ್ಕೆ ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಕನಿಷ್ಠಪಕ್ಷ ಒಂದು ಡಜನ್ ಆಕಾಂಕ್ಷಿಗಳು ಇದ್ದಾರೆ. ಆದರೆ ಈ ಬಾರಿ ವರಿಷ್ಠರು ಸಾಕಷ್ಟು ಅಳೆದು ತೂಗಿ ಅವರ ಸಾಮಥ್ರ್ಯ,ಪೂರ್ವಪರ ಹಿನ್ನೆಲೆ, ವ್ಯಕ್ತಿತ್ವ, ಸಂಘಟನಾ ಸಾಮಥ್ರ್ಯ ಸೇರಿದಂತೆ ಪ್ರತಿಯೊಂದನ್ನು ಅಳೆದು ತೂಗಿಯೇ ಹೊಸ ನಾಯಕನ ಶೋಧಕ್ಕೆ ಚಾಲನೆ ನೀಡುವರು.
ಮೂಲಗಳ ಪ್ರಕಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಡಿಸಿಎಂ ಗೋವಿಂದಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕರಾದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರ ಹೆಸರುಗಳು ಕೇಳಿಬರುತ್ತಿದೆ.

ಬಸವರಾಜ ಬೊಮ್ಮಾಯಿ: ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಅವರು ಹಾಲಿ ಗೃಹ ಸಚಿವರಾಗಿದ್ದಾರೆ. ಬಿಎಸ್ ಯಡಿಯೂರಪ್ಪರ ಆಪ್ತ ಬಳಗದಲ್ಲಿರುವ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿದ್ದಾರೆ. ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.

# ಮುರುಗೇಶ್ ನಿರಾಣಿ: ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಅವರು ಪಂಚಮಶಾಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ಬಂಡಾವಳ ಹೂಡಿಕೆಯ ರಹದಾರಿ ತೋರಿಸಿದವರು. ಯಡಿಯೂರಪ್ಪ ಅವರ ಜೊತೆಗೆ ವಿವಾದ, ಆರೋಪಗಳನ್ನು ಹೊತ್ತುಕೊಂಡವರು. ನಿರಾಣಿ ಒಡೆತನದ ಸಕ್ಕರೆ, ಇಂಧನ ಕ್ಷೇತ್ರದ ಉದ್ಯಮಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ನೌಕರರಿದ್ದಾರೆ. 90ರ ದಶಕದಿಂದ ಆರ್‍ಎಸ್‍ಎಸ್ ಜೊತೆ ಗುರುತಿಸಿಕೊಂಡಿರುವ ಇವರು ಮೂರು ಬಾರಿ ಶಾಸಕರಾಗಿದ್ದಾರೆ.

# ಅರವಿಂದ್ ಬೆಲ್ಲದ್: ಎರಡು ಬಾರಿ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಹುಬ್ಬಳ್ಳಿ -ಗದಗ ಭಾಗದಲ್ಲಿ ಜನಪ್ರಿಯತೆ ಹೊಂದಿದ್ದು, ಬೆಲ್ಲದ್ ಕುಟುಂಬ ಉದ್ಯಮದಲ್ಲೂ ಯಶಸ್ಸುಯಾಗಿದೆ. ಹಿರಿಯ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರರಾದ ಇವರು ಆರೆಸ್ಸೆಸ್ ಬೆಂಬಲ ಹೊಂದಿರುವ ರಾಜಕಾರಣಿ. ಉತ್ತರ ಕರ್ನಾಟಕ ಭಾಗದ ಎರಡನೇ ಪೀಳಿಗೆಯ ನೇತಾರ ಎಂದು ಬಿಂಬಿಸಲಾಗುತ್ತಿದೆ. ಅಚ್ಚರಿಯ ಹೆಸರಾಗಿ ಬೆಲ್ಲದ್ ಹೆಸರು ಸಿಎಂ ರೇಸ್ ಪಟ್ಟಿಯಲ್ಲಿದ್ದಾರೆ.

# ಸಿ.ಟಿ.ರವಿ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಗಿರುವ ಸಿ.ಟಿ.ರವಿ, ಸಂಘ ಪರಿವಾರದ ನೆಚ್ಚಿನ ಮುಖಂಡ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಸಚಿವ ಸ್ಥಾನ ತೊರೆದು ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದು, ಸಂಘಟನಾ ಸಾಮಥ್ರ್ಯ ಹೊಂದಿರುವ ಇವರು ಹಿಂದುತ್ವವಾದಿಯಾಗಿ ಮತದಾರರನ್ನು ಒಗ್ಗೂಡಿಸಬಲ್ಲ ಶಕ್ತಿ ಹೊಂದಿದ್ದಾರೆ. ಒಕ್ಕಲಿಗ ಸಮುದಾಯದ ಸಿಟಿ ರವಿ ಅವರು ನಾಲ್ಕು ಬಾರಿ ಶಾಸಕರಾಗಿದ್ದಾರೆ.

# ಸಿ.ಎನ್.ಅಶ್ವತ್ಥ ನಾರಾಯಣ: ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಐಟಿಬಿಟಿ ಸಚಿವರಾಗಿರುವ ಸಿ.ಎನ್.ಅಶ್ವತ್ಥನಾರಾಯಣ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ತಟಸ್ಥವಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿ ಎಲ್ಲಾ ಸಮುದಾಯದವರ ಒಲವು ಗಳಿಸಿದ್ದಾರೆ. ಇದು ಕರ್ನಾಟಕದ ಎರಡನೇ ಪೀಳಿಗೆ ಯುವ ಮುಖವಾಗಿ ಆಯ್ಕೆ ಮಾಡಲು ಮಾನದಂಡವಾಗಬಲ್ಲದು.

# ಪ್ರಲ್ಹಾದ್ ಜೋಷಿ: ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಕೂಡ ಕರ್ನಾಟಕದ ಸಿಎಂ ಸ್ಥಾನಕ್ಕೆ ಪರಿಗಣಿಸುವ ಚರ್ಚೆ ನಡೆದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅನಂತ್ ಕುಮಾರ್ ನಂತರ ಪ್ರಲ್ಹಾದ್ ಜೋಶಿ ಉನ್ನತ ಸ್ಥಾನಮಾನ ಹೊಂದಿದ್ದಾರೆ. ಮೂರು ಬಾರಿ ಸಂಸದರಾಗಿದ್ದು, ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಇವರು ಆರ್‍ಎಸ್‍ಎಸ್ ಬೆಂಬಲಿತ ಸಂಸದರಾಗಿದ್ದಾರೆ. ಉತ್ತಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದರೂ ಕರ್ನಾಟಕದಲ್ಲಿ ಈ ಬಾರಿ ಬ್ರಾಹ್ಮಣ ಕೋಟಾದಿಂದ ಸಿಎಂ ಆಯ್ಕೆ ಬಹುತೇಕ ಇಲ್ಲ ಎಂಬ ಸುದ್ದಿ ಇದೆ.

# ಸುನಿಲ್ ಕುಮಾರ್: ಕರ್ನಾಟಕಕ್ಕೆ ಯುವ ಮುಖ್ಯಮಂತ್ರಿಯನ್ನು ಆಯ್ಕೆಗೆ ಬಿಜೆಪಿ ಹೈಕಮಾಂಡ್ ಸುನಿಲ್ ಕುಮಾರ್ ಅವರನ್ನು ಅಚ್ಚರಿಯ ಆಯ್ಕೆಯಾಗಿ ಪರಿಗಣಿಸಬಹುದಾಗಿದೆ. ಕರ್ನಾಟಕದ ಮುಖ್ಯ ವಿಪ್ ಆಗಿರುವ ಸುನಿಲ್ ಅವರು ಕರಾವಳಿ ಭಾಗದ ಮುಖಂಡರಾಗಿದ್ದಾರೆ. ಕೇರಳ ಬಿಜೆಪಿಯ ಸಹ ಪ್ರಭಾರಿಯಾಗಿದ್ದಾರೆ. ಹಿಂದುತ್ವ ಬಳಸಿ ರಾಜಕೀಯ ನಡೆಸುವ ರಾಜಕಾರಣಿಯಾಗಿದ್ದು, ಸಂಘ ಪರಿವಾರದ ಕಟ್ಟಾಳುವಾಗಿದ್ದಾರೆ.

ಎಬಿವಿಪಿಯಿಂದ ಬೆಳೆದು ರಾಜಕಾರಣಿಯಾಗಿ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಿದ್ದು, ತಳಮಟ್ಟದಿಂದ ಬೆಳೆದು ಬಂದವರಿಗೆ ಮನ್ನಣೆ ನೀಡಲು ಬಿಜೆಪಿ ಮುಂದಾಗಬಹುದು. ಸಿಟಿ ರವಿ ಜೊತೆಗೂಡಿ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸುನಿಲ್ ಆರ್‍ಎಸ್‍ಎಸ್ ಮುಖಂಡರಾದ ಬಿ.ಎಲ್.ಸಂತೋಷ್, ದತ್ತಾತ್ರೇಯ ಹೊಸಬಾಳೆ ಅವರ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದಾರೆ.

Facebook Comments