ಬರ ಸಮಸ್ಯೆ ನಿವಾರಣೆ: ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ವಹಿಸಲು ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 15- ಕುಡಿಯುವ ನೀರು ಪೂರೈಕೆ, ಜಾನುವಾರುಗಳ ಮೇವು, ಜನರಿಗೆ ಉದ್ಯೋಗ ನೀಡುವುದೂ ಸೇರಿದಂತೆ ಬರಪರಿಸ್ಥಿತಿ ನಿರ್ವಹಣೆಯಲ್ಲಿ ಲೋಪವಾಗದಂತೆ ಆಯಾ ಜಿಲ್ಲಾಡಳಿತ ಕಾರ್ಯ ನಿರ್ವಹಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಪರೆನ್ಸ್‍ನಲ್ಲಿ ಅವರು ಈ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಯಲ್ಲಿ ಪ್ರತಿದಿನವೂ ಬರಪರಿಸ್ಥಿತಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡಬೇಕು. ಬರಪರಿಸ್ಥಿತಿ ತೀವ್ರವಾಗಿರುವ ಕಡೆಗಳಲ್ಲಿ ಖುದ್ದು ಭೇಟಿ ನೀಡಿ

ಪರಿಶೀಲಿಸಬೇಕು. ಬರದ ಜತೆಗೆ ಬೇಸಿಗೆಯೂ ತೀವ್ರವಾಗಿರುವ ಹಿನ್ನೆಲೆಯಲ್ಲಿ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು, ಅಗತ್ಯವಿರುವ ಕಡೆಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಬೇಕು,

ನೀರು ಲಭ್ಯವಿಲ್ಲದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಸಬೇಕು, ಟ್ಯಾಂಕರ್‍ಗಳ ಬಿಲ್ಲುಗಳನ್ನು ಆಗಾಗ್ಗೆ ಪಾವತಿಸಬೇಕು, ಬಾಕಿ ಉಳಿಸಿಕೊಳ್ಳಬಾರದು, ಹಾಗೆಯೇ ದುರ್ಬಳಕೆಯೂ ಆಗಬಾರದು ಎಂದು ಎಚ್ಚರಿಕೆ ನೀಡಿದರು. ಬರ ನಿರ್ವಹಣೆಗೆ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಕೂಡ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜಾನುವಾರುಗಳ ಮೇವಿಗೆ ತೊಂದರೆ ಇರುವುದು ಕಂಡು ಬಂದಿದ್ದು, ಕೂಡಲೇ ಆಯಾ ಜಿಲ್ಲಾಡಳಿತ ಗೋಶಾಲೆಗಳನ್ನು ಅಗತ್ಯವಿರುವೆಡೆ ತೆರೆಯಬೇಕು. ಹಾಗೆಯೇ ಮೇವು ಬ್ಯಾಂಕುಗಳನ್ನು ತೆರೆದು ಜಾನುವಾರುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕುಮಾರಸ್ವಾಮಿ ಸೂಚಿಸಿದರು.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ ಸಮುದಾಯ ಆಧಾರಿತ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಜನರು ಉದ್ಯೋಗ ಅರಸಿ ರಾಜ್ಯದಿಂದ ಗುಳೆ ಹೋಗದಂತೆ ಸ್ಥಳೀಯವಾಗಿಯೇ ಉದ್ಯೋಗಗಳನ್ನು ಒದಗಿಸಬೇಕೆಂದು ಜಿಪಂ ಸಿಇಒಗಳಿಗೆ ಆದೇಶಿಸಿದರು.

ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಖರ್ಚು ಮಾಡಬೇಕು. ಒಂದು ವೇಳೆ ಹಣದ ಕೊರತೆ ಉಂಟಾದರೆ ತಕ್ಷಣವೇ ಮೇಲಾಧಿಕಾರಿಗಳು ಅಥವಾ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಕೂಡಲೇ ಕುಡಿಯುವ ನೀರಿನ ಕಾರ್ಯಕ್ಕೆ ಸರ್ಕಾರ ಹಣ ಒದಗಿಸಲಿದೆ.

ದೂರುಗಳು ಬರದಂತೆ ಪರಿಣಾಮಕಾರಿಯಾಗಿ ಬರ ನಿರ್ವಹಣೆ ಮಾಡಬೇಕೆಂದು ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಬಾದರು. ಒಂದು ವೇಳೆ ಹಾಗೇನಾದರು ಆದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಶೇ.70ರಷ್ಟು ಅನುದಾನ ಕುಡಿಯುವ ನೀರಿನ ಯೋಜನೆಗೆ ಖರ್ಚಾದ ಕೂಡಲೇ ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಆಯಾ ಜಿಲ್ಲೆಗಳಿಂದ ಬರನಿರ್ವಹಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸ್ಥಳೀಯವಾಗಿ ಎದುರಿಸುತ್ತಿರುವ ಪರಿಹಾರಕ ವೀಡಿಯೋ ಕಾನ್ಪರೆನ್ಸ್ ಮೂಲಕವೇ ಸಿಎಂ ಸಲಹೆ , ಸೂಚನೆಗಳನ್ನು ನೀಡಿದರು.

ಡಿಸಿ ಮತ್ತು ಸಿಇಒಗಳೊಂದಿಗೆ ನಡೆಸಿದ ವೀಡಿಯೋ ಕಾನ್ಪರೆನ್ಸ್ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸರ್ಕಾರದ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಸೇರಿದಂತೆ ಕಂದಾಯ, ಕೃಷಿ, ಆರ್ಥಿಕ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಜನಸಂಪನ್ಮೂಲ, ಸಣ್ಣನೀರಾವರಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Facebook Comments