ಅಸಮಾಧಾನಗೊಂಡ ಶಾಸಕರಿಗೆ ಸಿಎಂ ಯಡಿಯೂರಪ್ಪ ಟ್ವೀಟ್ ಟಾಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ತಮ್ಮ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿರುವ ಅತೃಪ್ತ ಶಾಸಕರ ಜತೆ ಯಾವುದೇ ರೀತಿಯ ಮಾತುಕತೆ ಹಾಗೂ ಸಂಧಾನಕ್ಕೆ ಜಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಠಿಣ ಸಂದೇಶ ರವಾನಿಸಿದ್ದಾರೆ.

ಹೈಕಮಾಂಡ್ ಬೆಂಬಲ ಗಿಟ್ಟಿಸಿಕೊಂಡಿರುವ ಯಡಿಯೂರುಪ್ಪ ಅವರು, ಸದ್ಯ ರಾಜ್ಯದಲ್ಲಿ ಎದುರಾಗಿರುವ ಕೊರನಾ ನಿಯಂತ್ರಣ ಹಾಗೂ ಆಡಳಿತ ಚುರುಕಿಗೆ ಗಮನ ಹರಿಸಲು ಮುಂದಾಗಿದ್ದು, ಅತೃಪ್ತರ ಜತೆ ಮಾತುಕತೆ ಮುಗಿದ ಅಧ್ಯಯ ಎಂದು ಹೇಳಿದ್ದಾರೆ.

ಈಗಿನ ಲೆಕ್ಕಾಚಾರದಲ್ಲಿ ತಮ್ಮ ವಿರುದ್ಧ ಭಿನ್ನಮತ ಸಾರಿದರೆ ವರಿಷ್ಠರ ಬೆಂಬಲ ಅತೃಪ್ತರಿಗೆ ಸಿಗುವುದಿಲ್ಲ. ಒಂದು ಬಾರಿ ಸಂಧಾನಕ್ಕೆ ಬಗ್ಗಿದರೆ ಪುನಃ ಪುನಃ ಇದೇ ರೀತಿಯ ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಾರೆ ಎಂಬ ಕಾರಣಕ್ಕಾಗಿ ಬಿಎಸ್‍ವೈ ಕೂಡ ಸೊಪ್ಪು ಹಾಕಲು ಹಿಂದೇಟು ಹಾಕಿದ್ದಾರೆ.

ಭಿನ್ನಮತ ಸಾರಿರುವ ಗುಂಪಿನಲ್ಲೇ ಒಂದಿಬ್ಬರಿಗೆ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸಿದರೆ ಉಳಿದವರು ಸರಿದಾರಿಗೆ ಬರುತ್ತಾರೆ ಎಂಬುದನ್ನು ಅರಿತುಕೊಂಡಿರುವ ಸಿಎಂ, ನಾನು ಅಗತ್ಯವಿದ್ದರೆ ಹೈಕಮಾಂಡ್ ಜತೆ ಮಾತುಕತೆ ನಡೆಸುತ್ತೇನೆ.

ಬೇಕಿದ್ದರೆ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಸಂಬಂಸಿದ ವಿಷಯಕ್ಕೆ ಬಂದರೆ ನನ್ನದೇನು ಅಭ್ಯಂತರವಿಲ್ಲ. ಇಂತಹ ಬ್ಲಾಕ್‍ಮೇಲ್‍ಗೆ ನಾನು ಜಗ್ಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ 2008ರಲ್ಲೂ ಅಂದು ರೆಡ್ಡಿ ಸಹೋದರರು ಇದೇ ರೀತಿ ಶಾಸಕರನ್ನು ಹೈಜಾಕ್ ಮಾಡಿ ಹೈದರಾಬಾದ್‍ಗೆ ಕರೆದೊಯ್ದಿದ್ದರು.

ಅಂದು ನಾನು ಸಂಧಾನಕ್ಕೆ ಬಗ್ಗಿದ ಪರಿಣಾಮ ಅಕಾರ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಿತ್ತು. ಈಗ ಜನರ ವಿಶ್ವಾಸ ಗಳಿಸಿಕೊಂಡು ಆಡಳಿತ ನಡೆಸುತ್ತಿರುವಾಗ ಒಂದಿಬ್ಬರ ಸ್ವಹಿತಕ್ಕಾಗಿ ನಾನೇಕೆ ಬಗ್ಗಬೇಕು ಎಂದು ತಮ್ಮ ಆಪ್ತರ ಬಳಿ ಯಡಿಯೂರಪ್ಪ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರಾದ ಉಮೇಶ್‍ಕತ್ತಿ, ಮುರುಗೇಶ್ ನಿರಾಣಿ, ಬಸವನಗೌಡ ಪಾಟೀಲ್ ಯತ್ನಾಳ್, ದತ್ತಾತ್ರೇಯ ಪಾಟೀಲ ರೇವೂರ, ಚಿತ್ರದುರ್ಗದ ತಿಪ್ಪಾರೆಡ್ಡಿ, ಮೈಸೂರಿನ ವಿ.ರಾಮದಾಸ್, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಅರವಿಂದ್ ಬೆಲ್ಲದ್ ಸೇರಿದಂತೆ ಸುಮಾರು 8ರಿಂದ 10 ಶಾಸಕರು ಯಶವಂತಪುರದ ಪ್ಲಾಟ್‍ವೊಂದರಲ್ಲಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ಬೆಳ್ಳಂಬೆಳಗ್ಗೆ ತಮ್ಮ ಟ್ವಿಟರ್‍ನಲ್ಲಿ ನಾನು ಯಾವುದೇ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸುವುದಿಲ್ಲ. ಅದರ ಅಗತ್ಯವೂ ಇಲ್ಲ ಎನ್ನುವ ಮೂಲ ಸಂಧಾನ ಬಾಗಿಲು ಮುಚ್ಚಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಎಂದಿನಂತೆ ತಮ್ಮ ಅಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಮೂಲಗಳ ಪ್ರಕಾರ ಕೇಂದ್ರ ಬಿಜೆಪಿ ವರಿಷ್ಠರು ಕೂಡ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಅಷ್ಟು ಗಮನ ಹರಿಸಿಲ್ಲ ಎಂದು ತಿಳಿದು ಬಂದಿದೆ.ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಯಡಿಯೂರಪ್ಪ ತುಸು ಯಶಸ್ವಿಯಾಗಿರುವುದು ಹಾಗೂ ಇತ್ತೀಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ವೀರಶೈವ ಸಮುದಾಯ ಅವರನ್ನು ಬೆಂಬಲಿಸಿರುವ ಕಾರಣ ಸದ್ಯಕ್ಕೆ ಬಿಎಸ್‍ವೈ ಕುರ್ಚಿ ಆಭಾದಿತ ಎನ್ನಲಾಗುತ್ತಿದೆ.

ಇದೆಲ್ಲವನ್ನು ತಿಳಿದಿರುವ ಯಡಿಯೂರಪ್ಪ, ಅತೃಪ್ತ ಶಾಸಕರ ಬೆಳವಣಿಗೆಗಳ ಬಗ್ಗೆ ಕಿಂಚಿತೂ ಗಮನ ಕೊಡದಿರುವುದು ಭಿನ್ನಮತೀಯರಿಗೆ ಹಿನ್ನಡೆ ಎನ್ನಲಾಗುತ್ತಿದೆ. ಜತೆಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರಂತಹ ಪ್ರಬಲ ನಾಯಕತ್ವ ಇರುವಾಗ ನಮ್ಮ ಭಿನ್ನಮತಕ್ಕೆ ಶಾಸಕರು ಕೈ ಜೋಡಿಸುವುದು ಕಷ್ಟ ಎಂದು ಅರಿತಿರುವ ಅತೃಪ್ತರು ಎಷ್ಟೇ ಸಭೆ ನಡೆಸಿದಗೂ ಪ್ರಯೋಜನವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

Facebook Comments

Sri Raghav

Admin