ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಪೊಲೀಸರಿಗೆ 10 ಸಾವಿರ ಬಹುಮಾನ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.20-ಕರ್ತವ್ಯದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ, ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಪೊಲೀಸರಿಗೆ 10 ಸಾವಿರ ಬಹುಮಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದರು.   ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ 2017-18ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿಗಳ ನಿಸ್ವಾರ್ಥ ಸೇವೆಯಿಂದ ಸರ್ಕಾರ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಸೇವೆಯನ್ನು ಪರಿಗಣಿಸಿ 10 ಸಾವಿರ ನಗದು ಬಹುಮಾನ ಕೊಡಲಾಗುವುದು ಎಂದು ಹೇಳಿದರು.

ದೇಶದಲ್ಲೇ ಕರ್ನಾಟಕ ಪೊಲೀಸ್ ಪಡೆಗೆ ದಕ್ಷ, ವಿಶ್ವಾಸರ್ಹತೆ ಎಂಬ ಹೆಸರಿದೆ. ನಮ್ಮ ಅಧಿಕಾರಿಗಳು, ಶೌರ್ಯ, ನಿಸ್ವಾರ್ಥ ಸೇವೆ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ನಕ್ಸಲ್ ಚಟವಟಿಕೆ, ಕಳ್ಳತನ, ಮತೀಯ ಶಕ್ತಿಗಳ ನಿಯಂತ್ರಣ, ಕಾನೂನು ಬಾಹಿರ ಚಟುವಟಿಕೆಗಳು ಸೇರಿದಂತೆ ಸಮಾಜಘಾತುಕ ಶಕ್ತಿಗಳನ್ನ ಹತ್ತಿಕ್ಕಲು ಪೊಲೀಸರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯವಾದುದು ಎಂದರು.

ನಮ್ಮ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ಸರ್ಕಾರ ಯಾವಾಗಲೂ ಬೆಂಬಲ ನೀಡುತ್ತದೆ ಎಂದರು. ಸರ್ಕಾರದ ವತಿಯಿಂದ ಪೊಲೀಸರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ವಸತಿ ಸೌಲಭ್ಯ ನಿಮ್ಮ ಪ್ರಮುಖ ಬೇಡಿಕೆಯಾಗಿತ್ತು. ಅದಕ್ಕೂ ಸಹ ಸರ್ಕಾರ ಸ್ಪಂದಿಸಿದೆ.

ನಿಮ್ಮ ಬೇಡಿಕೆಗಳು ಏನೇ ಇದ್ದರೂ ಈಡೇರಿಸಲು ಸರ್ಕಾರ ಬದ್ದವಾಗಿದೆ. ನಿಮ್ಮಿಂದ ನಾವು ಏನು ನಿರೀಕ್ಷೆ ಮಾಡುತ್ತೇವೋ ಅದಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುವಂತೆ ಸಲಹೆ ಮಾಡಿದರು.  ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಪೊಲೀಸರು ಸಮಾಜ ಘಾತುಕ ಶಕ್ತಿಗಳು ಶಾಂತಿ ಮತ್ತು ಸುವ್ಯವಸ್ಥೆ ಹಾಳುಮಾಡಲು ಪ್ರಯತ್ನ ಮಾಡಿದರು. ಆದರೆ ಸಕಾಲಕ್ಕೆ ಸರಿಯಾಗಿ ಪೊಲೀಸರು ಅದೆಲ್ಲವನ್ನು ನಿಷ್ಕ್ರಿಯಗೊಳಿಸಿ ಶಾಂತಿ ಕಾಪಾಡಿದ್ದಾರೆ ಎಂದು ಪ್ರಶಂಸಿಸಿದರು.

ಗೃಹ ಇಲಾಖೆಯಲ್ಲಿ ಯಾವಾಗಲೂ ಸವಾಲುಗಳು ಇದ್ದೇ ಇರುತ್ತವೆ. ಅದನ್ನು ಧೈರ್ಯದಿಂದ ಎದುರಿಸಬೇಕು. ಆಗಲೇ ನಿಮ್ಮ ಸೇವೆ ಬೇರೆಯವರಿಗೂ ಗೊತ್ತಾಗಲಿದೆ ಎಂದರು.  ಮುಖ್ಯಮಂತ್ರಿ ಯಡಿಯೂರಪ್ಪ ಅವರು 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಅನುಮತಿ ಕೊಟ್ಟಿದ್ದಾರೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಕಟ್ಟಡಗಳು ಸೇರಿದಂತೆ ಹಲವಾರು ಕಟ್ಟಡಗಳ ನವೀಕರಣಗೊಳ್ಳುತ್ತಿದೆ. ನೀವು ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಕಾನ್‍ಸ್ಟೆಬಲ್‍ನಿಂದ ಹಿಡಿದು ಅಧೀಕ್ಷಕರವರೆಗೆ ಒಟ್ಟು 237 ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments