ಸದ್ಯದಲ್ಲೇ ಕೇಂದ್ರದಿಂದ ಪೂರೈಕೆಯಾಗಲಿದೆ ಕಲ್ಲಿದ್ದಲು : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಅ.13- ಕೇಂದ್ರದಿಂದ ಒಂದೆರಡು ದಿನಗಳಲ್ಲೇ ರಾಜ್ಯಕ್ಕೆ ಅಗತ್ಯವಾದ ಕಲ್ಲಿದ್ದಲು ಪೂರೈಕೆಯಾಗುವ ಸಂಭವವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ನಮಗೆ 8 ರ್ಯಾಕ್ ಕಲ್ಲಿದ್ದಲು ಪೂರೈಕೆಯಾಗಬೇಕಿತ್ತು. ಆದರೆ ಕಡಿಮೆ ಪ್ರಮಾಣದಲ್ಲಿ ಬಂದಿದ್ದರಿಂದ ಸಮಸ್ಯೆಯಾಗಿದೆ ಎಂಬುದನ್ನು ಒಪ್ಪಿಕೊಂಡಿದೆ.

ಈಗಾಗಲೇ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆ ನಾನು ಮಾತನಾಡಿ ರಾಜ್ಯಕ್ಕೆ ತುರ್ತಾಗಿ ಅಗತ್ಯವಿರುವಷ್ಟು ಕಲ್ಲಿದ್ದಲನ್ನು ಪೂರೈಕೆ ಮಾಡಬೇಕೆಂದು ಮನವಿ ಮಾಡಿದ್ದೇನೆ. ಒಂದೆರಡು ದಿನಗಳಲ್ಲಿ ಎರಡು ರ್ಯಾಕ್ ಕಲ್ಲಿದ್ದಲು ನಮಗೆ ಬರುವ ಸಂಭವವಿದೆ. ಇದರಿಂದ ಎದುರಾಗಿರುವ ಬಿಕ್ಕಟ್ಟು ಇತ್ಯರ್ಥವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಮ್ಮಲ್ಲಿ ಎಷ್ಟು ಪ್ರಮಾಣದ ಕಲ್ಲಿದ್ದಲು ಸಂಗ್ರಹವಾಗಿದೆ ಎಂಬುದರ ಕುರಿತು ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದೇನೆ. ಯಾರೂ ಕೂಡ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು. ದಸರಾ ಹಬ್ಬ ಮುಗಿದ ಬಳಿಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯವರ ಜೊತೆ ಸಭೆ ನಡೆಸಲಾಗುವುದು. 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಕುರಿತಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

ಶಾಲೆಗಳನ್ನು ಆರಂಭಿಸುವ ಕುರಿತಾಗಿ ಸರ್ಕಾರಕ್ಕೆ ಆತುರವಿಲ್ಲ. ನಮಗೆ ಮಕ್ಕಳ ಹಿತ ಮುಖ್ಯ. ತಾಂತ್ರಿಕ ಸಲಹಾ ಸಮಿತಿ ಯಾವ ಸಲಹೆ ನೀಡುತ್ತದೆಯೋ ನೋಡಿಕೊಂಡು ಬಳಿಕ ನಾವು ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ಸಿಎಂ ಸ್ಪಷ್ಟಪಡಿಸಿದರು.

2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಕೆಲವು ನೀತಿ ನಿಯಮಗಳಿವೆ. ಅವುಗಳನ್ನು ನೋಡಿಕೊಂಡು ತೀರ್ಮಾನಿಸಬೇಕು. ನಮಗೆ ಕೇಂದ್ರ ಸರ್ಕಾರದಿಂದ ಯಾವ ನಿರ್ದೇಶನ ಬರುತ್ತದೆ ಅದನ್ನು ನೋಡಿಕೊಂಡು ಮುಂದುವರೆಯುವುದಾಗಿ ಹೇಳೀದರು.
ಏನೇ ನಿರ್ಧಾರ ತೆಗೆದುಕೊಂಡರೂ ನಿಯಮಗಳ ವ್ಯಾಪ್ತಿಯಲ್ಲೇ ಮುನ್ನಡೆಯಬೇಕು. ಮಾರ್ಗಸೂಚಿ ಪ್ರಕಾರವೇ ನಾವು ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು.

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಗಳೇ ಇರಲಿ ಅಥವಾ ಸಾಮಾನ್ಯರೇ ಇರಲಿ. ಎಲ್ಲರಿಗೂ ಜವಾಬ್ದಾರಿ ಇರಬೇಕು. ಅದು ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದರು.

Facebook Comments