ಅಕಾಲಿಕ ಆಲಿಕಲ್ಲು ಮಳೆ : ನಷ್ಟದತ್ತ ಕಾಫಿ ಬೆಳೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಫೆ.20- ಜಿಲ್ಲಾಯ ವಿವಿಧೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದು ರಾಶಿ ರಾಶಿ ಆಲಿಕಲ್ಲುಗಳು ರಸ್ತೆಯೆಲ್ಲ ತುಂಬಿದ್ದರಿಂದ ಜನ ಕೆಲಕಾಲ ಆತಂಕಕ್ಕೊಳಗಾದರು. ಹಾಸನ ಜಿಲ್ಲಾಯ ಅರಕಲಗೂಡು ತಾಲ್ಲೂಕಿನ ಬರಗೂರು, ಶಾನುಬೋಗನಹಳ್ಳಿ, ಇಳ್ಳಹಳ್ಳಿ, ಅಂಕನಹಳ್ಳಿ, ದುಮ್ಮಿ ಸೇರಿದಂತೆ ಹಲವೆಡೆ ನಿನ್ನೆ ಮಧ್ಯಾಹ್ನ 3.30ರ ಸಮಯದಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆ ಸುರಿದಿದೆ. ಬೃಹತ್ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದರಿಂದ ರಸ್ತೆಯ ಬಣ್ಣವೇ ಬದಲಾಗಿತ್ತು. ಅಕಾಲಿಕ ಮಳೆಯಿಂದ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಮತ್ತೊಮ್ಮೆ ನಷ್ಟ ಅನುಭವಿಸಿದ್ದಾರೆ.

ಬೇಲೂರು, ಸಕಲೇಶಪುರ, ಆಲೂರು ಮತ್ತಿತರ ಮಲೆನಾಡು ಪ್ರದೇಶದಲ್ಲಿ ಹಾಗೂ ಕೆಲ ಬಯಲು ಸೀಮೆ ಪ್ರದೇಶದಲ್ಲೂ ಮಳೆ ಸುರಿದಿದ್ದು, ಕಾಫಿ ಬೆಳೆಗಾರರು ಮತ್ತು ರೈತರು ನಷ್ಟ ಅನುಭವಿಸುವಂತಾಗಿದೆ. ಕಾಫಿ ಬೆಳೆಯುವ ಮಲೆನಾಡು ಪ್ರದೇಶದಲ್ಲಿ ಇನ್ನೂ ಸಂಪೂರ್ಣವಾಗಿ ಕಾಫಿ ಹಣ್ಣು ಕೊಯ್ದು, ಪಲ್ಪಿಂಗ್ ಮಾಡಿ ಒಣಗಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈಗ ಸುರಿದಿರುವ ಅಕಾಲಿಕ ಮಳೆಯಿಂದಾಗಿ ಸಂಸ್ಕರಣೆಯ ಹಂತದಲ್ಲಿದ್ದ ಕಾಫಿ ಬೀಜ ನೆನೆದು ಗುಣಮಟ್ಟ ಕಡಿಮೆಯಾಗಿ ಕಂಗಾಲಾಗುವಂತಾಗಿದೆ.

ಈ ಅಕಾಲಿಕ ಮಳೆಯಿಂದಾಗಿ ಮೆಣಸಿಗೂ ಹಾನಿಯುಂಟಾಗಿದೆ. ಕಳೆದ ಜನವರಿಯಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಅವಧಿಗೆ ಮುನ್ನವೇ ಕಾಫಿ ಗಿಡಗಳು ಹೂ ಬಿಡಲಾರಂಭಿಸಿದ್ದವು. ಈಗ ಮತ್ತೊಮ್ಮೆ ಅಕಾಲಿಕ ಮಳೆಗೆ ಸಿಲುಕಿದೆ. ಒಟ್ಟಿನಲ್ಲಿ ಈ ವರ್ಷ ಕಾಫಿ ಬೆಳೆಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಬೆಳೆನಷ್ಟ ಸಮೀಕ್ಷೆಗೆ ಒತ್ತಾಯ: ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿನ ಏರುಪೇರು ಕಾಫಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

2015ರಿಂದ ಇತ್ತೀಚೆಗೆ ನಿರಂತರವಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಯು ಕಾಫಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿದೆ. ರೋಗಭಾದೆ, ಬೆಲೆ ಕುಸಿತ, ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿಯ ಜೊತೆಗೆ ಹವಾಮಾನದ ವೈಪರೀತ್ಯವು ಬೆಳೆ ಗಾರರಿಗೆ ಕಷ್ಟವಾಗಿ ಪರಿಣಮಿಸಿರುವುದರಿಂದ ಸಮೀಕ್ಷೆ ನಡೆಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಒತ್ತಾಯಿಸಿದೆ.

ಗಿಡದಲ್ಲಿದ್ದ ರೊಬೊಸ್ಟಾ ಕಾಫಿಯು ನೆಲಕಚ್ಚಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯು ಕೊಚ್ಚಿ ಹೋಗಿದೆ. ಈ ನಷ್ಟದ ಜತೆಗೆ ಅಕಾಲಿಕ ಮಳೆಯಿಂದ ಕಾಫಿ ಮೊಗ್ಗಾಗಿದ್ದು, ಹೂವಿಗಾಗಿ ನೀರು ನೀಡುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿಯ ಕಟಾವು ಸಂಪೂರ್ಣಗೊಳ್ಳದೆ ಇದ್ದು, ಮುಂದಿನ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಕಟಾವಿನ ಸಂದರ್ಭದಲ್ಲಿ ಅರಳಿರುವ ಮೊಗ್ಗು ಮತ್ತು ಹೂ ಉದುರಲಿದೆ. ಅಕಾಲಿಕ ಮಳೆಯಿಂದ ಆಗುತ್ತಿರುವ ನಷ್ಟವನ್ನು ಕಾಫಿ ಮಂಡಳಿ ಸಮೀಕ್ಷೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒಕ್ಕೂಟವು ಆಗ್ರಹಿಸಿದೆ.

ಕಾಫಿ ಉದ್ಯಮಕ್ಕೆ ವಿಶೇಷ ಪ್ಯಾಕೇಜ್ ದೊರಕಿಸಿಕೊಟ್ಟಲ್ಲಿ ವಿದೇಶಿ ವಿನಿಮಯದಿಂದ ಕಾಫಿ ಉದ್ಯಮಸರ್ಕಾರಕ್ಕೆ ದೊರಕಿಸುತ್ತಿರುವ ಆದಾಯ ಮುಂದುವರೆಯುವ ಜತೆಗೆ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ನೆರವಾಗುವುದು ಎಂದು ಕೆಜಿಎಫ್ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ ಮನವಿ ಮಾಡಿದ್ದಾರೆ.

Facebook Comments