ಫೀನಿಕ್ಸ್‌ನಂತೆ ಎದ್ದು ಬಂದ ಸಿದ್ಧಾರ್ಥ ಪತ್ನಿ ಮಾಳವಿಕ, ಕಾಫಿಡೇ ಸಿಬ್ಬಂದಿಗೆ ಭಾವನಾತ್ಮಕ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25- ಪ್ರಕ್ಷುಬ್ಧ ಕಾಲದಲ್ಲಿ ಕಂಪೆನಿಯ ಜೊತೆ ಹೆಗಲುಕೊಟ್ಟು ನಿಂತ ಎಲ್ಲರಿಗೂ ಧನ್ಯವಾದ ಹೇಳಿರುವ ಕಾಫಿ ಡೇಯ ನಿರ್ದೇಶಕಿ ಮಾಳವಿಕ ಸಿದ್ಧಾರ್ಥಹೆಗ್ಡೆ, ಸಂಸ್ಥೆಯ ಸಾಲ ನಿಭಾಯಿಸುವ ಮಟ್ಟಕ್ಕೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

2019ರ ಜುಲೈ 29ರಂದು ಉದ್ಯಮಿ ಸಿದ್ಧಾರ್ಥ ಹೆಗ್ಡೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಆರ್ಥಿಕ ಮುಗ್ಗಟ್ಟು ಪ್ರಮುಖ ಕಾರಣ ಎಂದು ಹೇಳಲಾಗಿತ್ತು.

ಸಿದ್ಧಾರ್ಥ ಸಾವಿನ ಬಳಿಕ ಅವರು ಸ್ಥಾಪಿಸಿದ ಕಾಫಿ ಡೇ ಸೇರಿದಂತೆ ಹಲವಾರು ಉದ್ಯಮಗಳ ಅಸ್ತಿತ್ವವೇ ಮುಳುಗಿ ಹೋಗಲಿದೆ ಎಂಬ ಆತಂಕ ವ್ಯಕ್ತವಾಗಿತ್ತು. ದುಖಃ ಮತ್ತು ಸಂಕಷ್ಟ ಪರಿಸ್ಥಿತಿಯಿಂದ ಫಿನಿಕ್ಸ್‍ನಂತೆ ಎದ್ದು ಬಂದಿರುವ ಸಿದ್ಧಾರ್ಥ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಕಾಫಿ ಡೇ ಕಂಪೆನಿಯ ಎಲ್ಲಾ ಸಿಬ್ಬಂದಿಗಳಿಗೆ ಕಂಪೆನಿಯ ಭವಿಷ್ಯದ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಒಂದು ವರ್ಷದ ಹಿಂದೆ ನಾವು ದುರಂತ ಮತ್ತು ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದೆವು. ಸ್ನೇಹ ಬಳಗ, ಕುಟುಂಬ ಆ ಸಂದರ್ಭದಲ್ಲಿ ನೀಡಿದ ಬೇಷರತ್ ಬೆಂಬಲ ನನ್ನನ್ನು ಸಂಕಷ್ಟದಿಂದ ಹೊರ ಬರಲು ಸಹಕರಿಸಿದೆ.

ಕಂಪೆನಿಯ ಸಾಲ 7200 ಕೋಟಿಯಿಂದ 3200 ಕೋಟಿಗೆ ಕಡಿಮೆಯಾಗಿದೆ. ಇದು ನಿಭಾಯಿಸಬಹುದಾದ ಪರಿಸ್ಥಿತಿಯಾಗಿದೆ. ಆದರೂ ಕಂಪೆನಿಯ ಉಜ್ವಲ ಭವಿಷ್ಯಕ್ಕಾಗಿ ಸಾಲವನ್ನು ಮತ್ತಷ್ಟು ಕಡಿಮೆ ಮಾಡಲು ಕೆಲ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತದೆ ಎಂದಿದ್ದಾರೆ.

ಸಿದ್ಧಾರ್ಥ ಅವರಿಗೆ ಉದ್ಯಮವೇ ಸರ್ವಸ್ವವಾಗಿತ್ತು, ಕಂಪೆನಿಯ ಉದ್ಯೋಗಿಗಳೇ ಕುಟುಂಬದ ಸದಸ್ಯರಾಗಿದ್ದರು. ಸಂಕಷ್ಟ ಕಾಲದಲ್ಲಿ ಕಂಪೆನಿಯ ಉದ್ಯೋಗಿಗಳು ಪಿಲ್ಲರ್‍ಗಳಂತೆ ನಿಂತಿದ್ದಾರೆ.

ಎಲ್ಲಾ ಅನುಮಾನಗಳನ್ನು ನಿವಾರಿಸಿ ಸಿದ್ಧಾರ್ಥ ಅವರು ಸ್ಥಾಪಿಸಿದ ಮೈಂಡ್ ಟ್ರೀ, ಗ್ಲೋಬಲ್‍ವಿಲೇಜ್ ಟೆಕ್‍ಪಾರ್ಕ್, ವೇ2ವೆಲ್ತ್, ಗ್ಲೋಬಲ್‍ಎಡ್ಜ್ ಸೇರಿ ಹಲವಾರು ಕಂಪೆನಿಗಳನ್ನು ನಾವು ಬೆಳೆಸಬೇಕಿದೆ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಉಜ್ವಲ ಭವಿಷ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Facebook Comments

Sri Raghav

Admin