ಮಹಾಮಳೆಗೆ ಕಾಫಿ ಬೆಳೆ ನಾಶ : ಕೂಡಲೆ ಕೇಂದ್ರ ನೆರವಿಗೆ ಧಾವಿಸಲಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಆ.13- ಮಹಾ ಮಳೆಯಿಂದ ಹಾನಿಗೊಳಗಾದ ಮೂಡಿಗೆರೆ ತಾಲ್ಲೂಕಿನ ಕಾಫಿ ಬೆಳೆಯುವ ಪ್ರದೇಶಗಳಿಗೆ ಕೆಜಿಎಫ್ ಪದಾಧಿಕಾರಿಗಳು ಮತ್ತು ಕಾಫಿ ಮಂಡಳಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್ ಮತ್ತು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಅವರ ನೇತೃತ್ವದಲ್ಲಿ ಬೆಳಗಿನಿಂದ ಸಂಜೆಯವರೆಗೆ ಸಂಚರಿಸಿದ ತಂಡ ಬಂಕೇನಹಳ್ಳಿ, ಬಾಳೂರು, ಮಾಲೇಮನೆ, ಸುಂಕಸಾಲೆ, ಹಳ್ಳೀಕೆರೆ, ಮಧುಗಿರಿ ಸೇರಿದಂತೆ ಅನೇಕ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿತು.

ಎಡಬಿಡದೆ ಸುರಿದ ವರ್ಷಧಾರೆಯಿಂದಾಗಿ ಹಲವು ತೋಟಗಳಲ್ಲಿ ಗುಡ್ಡ ಕುಸಿದು ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ಬುಡಮೇಲಾಗಿ ಬಿದ್ದಿರುವುದು ಕಾಫಿ ಉದುರಿ ಮಣ್ಣುಪಾಲಾಗಿರುವುದು ಈ ವೇಳೆ ಕಂಡು ಬಂದಿತು. ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದ ಅನಾಹುತಗಳು, ಮಲೆನಾಡಿನ ತೋಟಗಳಲ್ಲೂ ಮರುಕಳಿಸಿರುವುದು ಬಹಳಷ್ಟು ಕಡೆ ಇಡೀ ತೋಟವೇ ನಾಶವಾಗಿರುವುದು ತಂಡಕ್ಕೆ ಗೋಚರಿಸಿತು.

ಅನ್ನಕ್ಕೂ ಸಂಚಕಾರ: ಇದೇ ವೇಳೆ ತಂಡದೊಂದಿಗೆ ಮಾತನಾಡಿದ ಕಾರ್ಮಿಕರು, ಮಳೆಯಿಂದಾಗಿ ತಮ್ಮ ಮನೆಗಳು ಕುಸಿದಿದ್ದು ಒಂದೆಡೆ ವಾಸಿಸಲು ಸ್ಥಳವಿಲ್ಲದೆ ನಾವು ಪರದಾಡುತ್ತಿದ್ದೇವೆ. ಇನ್ನೊಂದೆಡೆ ತೋಟಗಳಲ್ಲಿ ಕೂಲಿ ಕೆಲಸವಿಲ್ಲದೆ ದಿನದ ಅನ್ನಕ್ಕೂ ಸಂಚಕಾರ ಬಂದಿದೆ ಎಂದು ಅಳಲು ತೋಡಿಕೊಂಡರು.

ಕಳೆದ ವಾರವಷ್ಟೇ ತಮ್ಮ ತೋಟವನ್ನು ಮೂರು ಕೋಟಿಗೆ ತಮಗೆ ಮಾರುವಂತೆ ಕೆಲವರು ಪರಿಪರಿಯಾಗಿ ಕೇಳಿದ್ದರು. ಆಗ ನಾನು ಮಾರಿದ್ದರೆ ಉದ್ದಾರವಾಗುತ್ತಿದ್ದೆ ಎಂದು ಹಲುಬಿದ ಕಾಫಿ ಬೆಳೆಗಾರ ಸುರೇಶ್, ಇದೀಗ ನನ್ನ ಕಣ್ಣೆದುರೇ 30 ಎಕರೆ ತೋಟ ಸಂಪೂರ್ಣ ನಾಶವಾಗಿದೆ ಎಂದು ತಿಳಿಸಿದರು.

# 9 ಎಕರೆ ತೋಟ ನಾಶ: ಅಡಿಕೆ, ಗದ್ದೆ ಸೇರಿದಂತೆ ತಮಗೆ 15 ಎಕರೆ ಭೂಮಿ ಇತ್ತು ಅದರಲ್ಲೀಗ ರಾತ್ರೋರಾತ್ರಿ 9 ಎಕರೆ ತೋಟ ನಾಶವಾಗಿದೆ ಎಂದು ನಾಗವೇಣಿ ಅವಲತ್ತುಕೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ಕೆಜಿಎಫ್ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್, ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರಾಥಮಿಕ ವರದಿಯ ಪ್ರಕಾರ 500 ಎಕರೆಯಷ್ಟು ಕಾಫಿ ತೋಟ ನಾಶವಾಗಿದೆ ಎಂದರು.

# 30 ಸಾವಿರ ಟನ್ ಮೆಣಸು ನಾಶ: ಬೆಳೆಗಾರರ ಮನೆ ಸೇರಿದಂತೆ 250 ರಿಂದ 300 ಕೋಟಿಯಷ್ಟು ಆಸ್ತಿ ನಷ್ಟವಾದರೆ, 2400 ಕೋಟಿಗೂ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ, 30 ಸಾವಿರ ಟನ್‍ನಷ್ಟು ಮೆಣಸಿನ ಬೆಳೆ ನಾಶವಾಗಿದೆ ಎಂದು ತಿಳಿಸಿದರು. ಕಾಫಿ ಉದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕು, ಅವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಆಸ್ತಿಪಾಸ್ತಿ ಮತ್ತು ಬೆಳೆ ನಷ್ಟದ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಕಾಫಿ ಉದ್ಯಮಕ್ಕೆ ಹೆಚ್ಚಿನ ನಷ್ಟ ಸಂಭವಿಸಿದೆ ಎಂದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಿ.ಎಂ.ವಿಜಯ್ , ಪ್ರಧಾನ ಕಾರ್ಯದರ್ಶಿ ಮುರಳೀಧರ್ ಬಕ್ಕರವಳ್ಳಿ, ಸಂಘಟನಾ ಕಾರ್ಯದರ್ಶಿ ರೇವಣ್ಣಗೌಡ, ಖಜಾಂಚಿ ಐ.ಎಂ.ಮಹೇಶ್‍ಗೌಡ, ದೇವರಾಜ್, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಕಾಫಿ ಮಂಡಳಿ ಜಂಟಿ ನಿರ್ದೇಶಕ ಡಾ. ವಿ.ಆರ್.ಗುಡ್ಡೇಗೌಡ, ಹಿರಿಯ ಸಂಪರ್ಕಾಧಿಕಾರಿ ಎಂ.ಗೋಪಾಲ್, ಉಪನಿರ್ದೇಶಕ ಡಿ.ಹೆಚ್.ಶ್ರೀನಿವಾಸ್ ತಂಡದಲ್ಲಿದ್ದರು.

Facebook Comments