ಸರ್ಕಾರಕ್ಕೆ ಕೇಳಿಸದ ಕಾಫಿ ಬೆಳೆಗಾರರ ಅರಣ್ಯರೋಧನೆ, ಆನೆಕಾಟ-ಅತಿವೃಷ್ಟಿಯಿಂದ ಜೀವನ ದುಸ್ತರ
ಹಾಸನ: ಹಾಸನ ಜಿಲ್ಲೆಯ ಮಲೆನಾಡು ಹಾಗೂ ಅರೆಮಳೆನಾಡು ಭಾಗವಾದ ಸಕಲೇಶಪುರ, ಆಲೂರ, ಬೇಲೂರು ತಾಲ್ಲೂಕಿನ ಬಹುತೇಕ ಕಾಫಿಬೆಳೆಗಾರರು ಆನೆ ಉಪಟಳದಿಂದ ನಲುಗುವ ಜೊತಗೆ ಅತಿವೃಷ್ಟಿ ಸಂಕಷ್ಟಕ್ಕೆ ಸಿಲುಕಿದ್ದು ಕಾಫಿ ಬೆಳೆದು ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಎದುರಾಗಿದೆ.
ಕಾರಣ..ಇಲ್ಲಿನ ಬಹುತೇಕ ಕಾಫಿ ಫಸಲು ವಿಪರೀತ ಮಳೆಯಿಂದಾಗಿ ನೆಲ ಕಚ್ಚುತ್ತಿದ್ದು ಹಣ್ಣಾದ ಕಾಫಿ ಬೀಜಗಳು ಉದುರಿಹೊಗುತ್ತಿದೆ.. ದಿನ ಬೆಳಗಾದರೆ ಮಳೆಯ ಆರ್ಭಟದಿಂದ ಕಾಫಿ ಕುಯಿಲು ಮಾಡಲಾಗದೆ ಗಿಡದಲ್ಲೆ ಉಳಿದಿದ್ದು ಕಣ್ಣ ಮುಂದೆಯೇ ತಾವು ವರ್ಷದಿಂದ ಅರೈಕೆ ಮಾಡಿ ಬೆಳೆದ ಬೆಳೆ ಮಣ್ಣು ಪಾಲಾಗುವುದನ್ನು ಕಂಡ ಬೆಳೆಗಾರ ಪರಿತಪಿಸು ವಂತಾಗಿದೆ.
ಅರೆಬಿಕ ಕಾಫಿ ತಳಿಯ ಗಿಡಗಳಲ್ಲಿ ಈಗಾಗಲೇ ಬಹುತೇಕ ಹಣ್ಣಾಗಿದ್ದು ಕುಯಿಲು ಮಾಡಿದರೆ ಅದನ್ನು ಒಣಗಿಸಲು ಬಿಸಿಲೆ ಕಾಣದಂತಾಗಿದೆ. ಇದರಿಂದ ಗಿಡದಲ್ಲಿಯೇ ಹಣ್ಣು ಕೊಳೆತು ಉದುರುತ್ತಿದೆ. ಈ ಬಾರಿ ಉತ್ತಮ ಫಸಲೇನು ಗಿಡದಲ್ಲಿ ಕಂಡರು ಸಹ ಅದನ್ನು ಕುಯಿಲು ಮಾಡಿ ಒಣಗಿಸಲು ಆಗದೆ ಬೆಳೆಗಾರ ಕೈ ಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಕಾಫಿ ಕಾಯಿ ಹಣ್ಣಾಗಿ ಕುಯಿಲಿಗೆ ಬರುತ್ತದೆ. ಈ ಸಂದರ್ಭದಲ್ಲಿ ಮಳೆಯಾದರೆ ಕಾಫಿಬೀಜ ಒಣಗಿಸಲು ಆಗುವುದಿಲ್ಲ ನಡುವೆ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯು ಹೆಚ್ಚಿದೆ. ಸರಿಯಾದ ಸಮಯಕ್ಕೆ ಕಾಫಿ ಕುಯಿಲು ಶೇಖರಿಸಿ ಒಣಗಿಸದಿದ್ದರೆ ಅದರ ಗುಣಮಟ್ಟದ ಮೇಲು ಪರಿಣಾಮ ಬೀರಲಿದ್ದು ಬೆಲೆಯ ಕುಸಿತವು ಎದುರಾಗಲಿದೆ. ರೋಬಸ್ಟ್ ತಳಿಯ ಕಾಫಿ ನವೆಂಬರ್ ನಲ್ಲಿ ಸಾಮಾನ್ಯವಾಗಿ ಹಣ್ಣಾಗಲಿದೆ ಅದರೆ ಅದು ಸಹ ಬೇಗ ಹಣ್ಣಾಗಿ ಕುಯಿಲಿಗೆ ಬಂದಿದ್ದು ಮತ್ತಷ್ಟು ಹಾನಿಗೆ ಕಾರಣವಾಗಿದೆ.
# ನೋಟಿಸ್ ಎಂಬ ಬರೆ;
ಇನ್ನೂ ಕಾಫಿ ಬೆಳೆ ನಿರ್ವಹಣೆಗೆ ಸ್ಥಳೀಯ ಬ್ಯಾಂಕ್ ಗಳಿಂದ ಲಕ್ಷಾಂತರ ರೂ ಹಣ ಸಾಲ ಪಡೆದ ಬೆಳೆಗಾರರು ಕಾಫಿ ಫಸಲು ಕುಯಿಲು ಮಾಡಲಾಗದೆ ಕೈಕಟ್ಟಿ ಕುಳಿತಿದ್ದರೆ ಇತ್ತ ಬ್ಯಾಂಕ್ ನಿಂದ ಸಾಲದ ಹಣ ಪಾವತಿಸುವಂತೆ ಕಾಫಿ ತೋಟದ ಮಾಲೀಕರಿಗೆ ನೋಟೀಸ್ ಜಾರಿ ಮಾಡುತ್ತಿದ್ದಾರೆ.ಇದರಿಂದ ಗಾಯದ ಮೇಲೆ ಬರೆಯಳೆದಂತಾಗಿದೆ.
ಸಾಲ ತೀರಿಸಲು ಫಸಲು ಕುಯಿಲು ಮಾಡಲಾಗದ ಪರಿಸ್ಥಿತಿ ಬೆಳೆಗಾರರದ್ದಾಗಿದೆ. ಅಲ್ಲದೆ ಕಳೆದ ಬಾರಿ ಸಾಲಮನ್ನಾ ಯೋಜನೆಗೆ ಒಳಪಟ್ಟ ಬಹುತೇಕ ಬೆಳೆಗಾರರಿಗೆ ಸ್ಥಳೀಯ ಸಹಕಾರಿ ಬ್ಯಾಂಕ್ ಮರು ಸಾಲ ನೀಡಲು ನಿರಾಕರಿಸಿವೆ. ಇವರೆಲ್ಲಾ ಸ್ಥಳೀಯ ವಾಗಿ ಕೈಸಾಲ ಮಾಡಿದ್ದು ಅವರಿಗೂ ಉತ್ತರ ನೀಡುವ ಪರಿಸ್ಥಿತಿಯಲ್ಲಿಲ್ಲ.
# ಸಣ್ಣ ಹಿಡುವಳಿದಾರರೇ ಹೆಚ್ಚು;
ಜಿಲ್ಲೆಯಲ್ಲಿ ಬಹುತೇಕ ಸಣ್ಣ ಹಿಡುವಳಿ ಬೆಳೆಗಾರರೇ ಹೆಚ್ಚಿದ್ದಾರೆ. ಅಲ್ಲದೆ ಕೂಲಿ ಕಾರ್ಮಿಕರ ಕೊರತೆ ಕಾರಣ ಮನೆಯವರೆ ಹೆಚ್ಚು ತೊಟದಲ್ಲಿ ದುಡಿಯುವ ಪರಿಸ್ಥಿತಿ ಇದೆ. ಇನ್ನು ಜೀವನ ನಿರ್ವಹಣೆ ಕಷ್ಟದಲ್ಲಿ ಇರುವಾಗ ಪ್ರಕೃತಿ ಯ ಮುನಿಸು ಕಾಫಿ ಬೆಳೆಗಾರರ ನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.ಸಾಲ ಮಾಡಿ ಬೆಳೆಗೆ ಸುರಿದು ಅದರಿಂದ ಕಿಂಚುತ್ತು ಲಾಭ ಕಾಣದ ಪರಿಸ್ಥಿತಿಗೆ ಇಂದು ಕಾಫಿ ಬೆಳೆಗಾರ ತಲುಪಿದ್ದು ಇನ್ನು ಕೆಲವು ದಿನಗಳು ಇದೇ ರೀತಿ ಮಳೆ ಮುಂದುವರೆದಲ್ಲಿ ತೋಟದ ಬಹುತೇಕ ಕಾಫಿ ಬೆಳೆ ಮಣ್ಣು ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
# ಆನೆ ಕಾಟ;
ಕಾಫಿ ಬೆಳೆಗೆ ಹಲವು ರೋಗ ಭಾದೆ , ಮೆಳೆ ಹಾವಳಿ ನಡುವೆ ಆನೆ ಹಾವಳಿಯ ಕಾರಣ ಮತ್ತಷ್ಟು ಸಂಕಷ್ಟದಲ್ಲಿ ದಿನ ದೂಡುತ್ತಿರುವ ಸಕಲೇಶಪುರ, ಆಲೂರು ಭಾಗದ ಕಾಫಿ ಬೆಳೆಗಾರರು ಕಾಫಿ ಜೊತೆಗೆ , ಮೆಣಸು, ಬಾಳೆ ಸೇರಿದಂತೆ ಇತರೆ ಬೆಳೆಗಳಾದ ಭತ್ತ,ಶುಂಠಿ, ಜೋಳದ ಬೆಳೆಯನ್ನು ಆನೆಗಳು ತಿಂದು ತುಳಿದು ಹಾನಿ ಮಾಡುತ್ತ ಇಲ್ಲಿನ ರೈತರ ಜೀವ ಹಿಂಡುತ್ತಿದೆ.
ದಿನ ಬೆಳಗಾದರೇ ಮನೆಯ ಮುಂದೆ ಸಂಚರಿಸುವ ಇಪ್ಪತ್ತಕ್ಕು ಹೆಚ್ಚು ಆನೆಗಳ ಹಿಂಡು ಬೇಕಾ ಬಿಟ್ಟಿ ಗ್ರಾಮ, ತೋಟ , ಗದ್ದೆಯಲ್ಲಿ ಸಂಚಾರ ಮಾಡುತ್ತ ಸಿಕ್ಕ ಸಿಕ್ಕ ಬೆಳೆ ತುಳಿದು ಹಾನಿಮಾಡುತ್ತಿವೆ. ಇನ್ನು ಹಲವು ಮಂದಿಯ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿರುವ ಆನೆಗಳ ಉಪಟಳದಿಂದ ಇಲ್ಲಿನ ಗ್ರಾಮಸ್ಥರು ರೂಸಿ ಹೊಗಿದ್ದಾರೆ.
ಆನೆ ಹಾವಳಿಗೆ ಸಾವಿಗೀಡಾದ ಕುಟುಂಬ ಕ್ಕೆ ಕನಿಷ್ಟ ಪರಿಹಾರ ನೀಡುವ ಅರಣ್ಯ ಇಲಾಖೆ ಅನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸಿಲ್ಲಾ.ಸರ್ಕಾರವು ಸಹ ಇಲ್ಲಿನ ಗ್ರಾಮಸ್ಥರ ಅರಣ್ಯರೋಧನೆಗೆ ಕೊನೆಯಾಡುವ ಯಾವ ಪ್ರಯತ್ನ ವನ್ನು ಮಾಡಿಲ್ಲಾ ಎಂದು ದೂರುತ್ತಾರೆ ಗ್ರಾಮಸ್ಥರು.
# ವಿಶೇಷ ಪ್ಯಾಕೇಜ್ ಗೆ ಒತ್ತಾಯ;
ಮಲೆನಾಡು ಭಾಗದಲ್ಲಿ ಪ್ರತಿ ವರ್ಷ ಅತೀವೃಷ್ಟಿಯುಂಟಾಗುತ್ತಿದೆ , ಸಕಲೇಶಪುರ ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಗುಡ್ಡಕುಸಿತ ಉಂಟಾಗಿದೆ. ಹಲವು ಗ್ರಾಮದ ಸಂಪರ್ಕ ರಸ್ತೆ ಹದಗೆಟ್ಟಿದೆ ಗದ್ದೆಗಳಿಗೆ ಹೇಮಾವತಿ ನದಿ ನೀರು ಉಕ್ಕಿ ಹರಿದು ಬೆಳೆನಾಶವಾಗಿದೆ. ತೀವ್ರ ಮಳೆಯ ಕಾರಣ ಬೆಳೆ ಹಾನಿ ಸಂಭವಿಸಿದ ಹಾನಿ ಕುರಿತು ಕಳೆದ ಬಾರಿ ಸಚಿವದ್ವಯರಾದ ಸಿ.ಟಿ.ರವಿ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ , ಆರ್.ಅಶೋಕ್ ಹಾನಿ ಪ್ರದೇಶದ ಪರಿಶೀಲನೆ ನಡೆದಸಿದ್ದರು, ಅಲ್ಲದೆ ಸಂಭಂದಿಸಿದ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದು ವಿಶೇಷ ಪ್ಯಾಕೇಜ್ ನೀಡುವ ಭರವಸೆ ಕೇವಲ ಭರವಸೆ ಯಾಗಿ ಉಳಿದಿದೆ. ಇನ್ನಾದರು ಬೆಳೆಗಾರರ ಹಾಗೂ ರೈತರ ಸಮಸ್ಯೆ ಗೆ ಸರ್ಕಾರದ ಸೂಕ್ತ ಸ್ಪಂದನೆ ಅಗತ್ಯವಿದ್ದು ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಒಟ್ಟಾರೆ ಒಂದೆಡೆ ಅತೀವೃಷ್ಟಿ ,ನೆರೆ ಹಾವಳಿ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ್ದರೆ, ಮತ್ತೊಂದೆಡೆ ಆನೆ ಹಾವಳಿ ಜೀವ ಭಯ ಇಲ್ಲಿನ ಗ್ರಾಮಸ್ಥರನ್ನು ನಿದ್ದೆಗೆಡಿಸಿದೆ. ಇದರಿಂದ ಜೀವನ ನಿರ್ವಹಣೆ ದುಸ್ತರವಾಗಿದೆ ಇನ್ನಾದರು ಸರ್ಕಾರ ಇತ್ತ ಗಮನಹರಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂಬುದು ಇಲ್ಲಿನ ರೈತರು ಹಾಗೂ ಕಾಫಿ ಬೆಳೆಗಾರರ ಮನವಿಯಾಗಿದೆ.
-ಸಂತೋಷ್ ಸಿ.ಬಿ ಹಾಸನ