ಸೈಕಲ್‍ನಲ್ಲಿ ಬಂದು ನಾಣ್ಯಗಳನ್ನು ಎಸೆದು ಹೋದ ವ್ಯಕ್ತಿ, ಮೈಸೂರಲ್ಲಿ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.22- ನಗರದ ಸೀಬಯ್ಯ ರಸ್ತೆಯಲ್ಲಿ ಸೈಕಲ್‍ನಲ್ಲಿ ಬಂದ ವ್ಯಕ್ತಿಯೊಬ್ಬ ನಾಣ್ಯಗಳನ್ನು ಎಸೆದು ಹೋಗಿದ್ದು, ಈ ನಾಣ್ಯಗಳನ್ನು ತೆಗೆದುಕೊಂಡಿದ್ದ ವ್ಯಕ್ತಿಯನ್ನು ಪಾಲಿಕೆ ಆರೋಗ್ಯ ಅಧಿಕಾರಿಗಳು ಪತ್ತೆಹಚ್ಚಿ ನಾಣ್ಯಗಳನ್ನು ವಶಕ್ಕೆ ಪಡೆದು ವೈರಾಣು ನಿರೋಧಕ ಸಿಂಪಡಿಸಿದ್ದಾರೆ.

ಈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸೈಕಲ್‍ನಲ್ಲಿ ಬಂದು ನಾಣ್ಯಗಳನ್ನು ದಾರಿಯುದ್ದಕ್ಕೂ ಎಸೆದು ಹೋಗಿದ್ದಾನೆ. ಈ ಸಂದರ್ಭದಲ್ಲಿ ಈ ಮಾರ್ಗವಾಗಿ ಬರುತ್ತಿದ್ದ ದಾರಿಹೋಕರೊಬ್ಬರು ನಾಣ್ಯ ಬಿದ್ದಿರುವುದನ್ನು ಗಮನಿಸಿ ತೆಗೆದುಕೊಂಡಾಗ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಇನ್ನೂ ಹಲವು ನಾಣ್ಯಗಳು ಸಿಕ್ಕಿವೆ.

ಒಟ್ಟು 20 ರೂ. ಸಂಗ್ರಹವಾಗಿದೆ. ಕೊರೊನಾ ಭೀತಿ ನಡುವೆ ಅನುಮಾನಗೊಂಡ ಸ್ಥಳೀಯ ನಿವಾಸಿಗಳು ತಕ್ಷಣ ಪೊಲೀಸರು ಹಾಗೂ ಪಾಲಿಕೆಗೆ ತಿಳಿಸಿದ್ದಾರೆ. ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಬಂದು ನಾಣ್ಯಗಳನ್ನು ತೆಗೆದುಕೊಂಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಆತನಿಂದ ನಾಣ್ಯಗಳನ್ನು ವಶಕ್ಕೆ ಪಡೆದು ಆತನಿಗೂ ವೈರಾಣು ನಿರೋಧಕ ಸಿಂಪಡಿಸಿ ನಾಣ್ಯಗಳಿಗೂ ಸಿಂಪಡಿಸಿದ್ದಾರೆ.

ಈ ರಸ್ತೆಯಲ್ಲಿ ಯಾರು ಬಂದು ನಾಣ್ಯಗಳನ್ನು ಎಸೆದಿದ್ದಾರೆ ಎಂಬ ಬಗ್ಗೆ ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

Facebook Comments

Sri Raghav

Admin