ರಾಜ್ಯದಲ್ಲಿ ಮೈ ಕೊರೆಯಲಿದೆ ಮತ್ತಷ್ಟು ಚಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.26- ರಾಜ್ಯದಲ್ಲಿ ಹಿಂಗಾರು ಮಳೆ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ಚಳಿಯ ಪ್ರಮಾಣ ಹೆಚ್ಚಳವಾಗಿದೆ. ಮಾಗಿ ಚಳಿ ಸಂಕ್ರಾಂತಿವರೆಗೂ ಕಂಡುಬರಲಿದೆ. ಈಗಾಗಲೇ ಬಹಳಷ್ಟು ಕಡೆ ಮೈ ಕೊರೆಯುವ ಚಳಿ ಕಂಡುಬರುತ್ತಿದ್ದು, ಬಹಳಷ್ಟು ಕಡೆ ಬೆಳಗಿನ ವೇಳೆ ಮಂಜು ಮುಸುಕಿದ ವಾತಾವರಣ ಸಾಮಾನ್ಯವಾಗಿದೆ.  ರಾಜ್ಯದಲ್ಲಿ ಗಾಳಿಯ ವೇಗ ಬಹಳ ಕಡಿಮೆಯಿದ್ದು, ಆದ್ರ್ರತೆ ಪ್ರಮಾಣವು ಹೆಚ್ಚಾಗಿರುವುದರಿಂದ ಚಳಿಯು ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ರಾಜ್ಯದಲ್ಲಿ ಸರಾಸರಿ 70ರಷ್ಟು ಆದ್ರ್ರತೆ ಕಂಡುಬರುತ್ತಿದೆ. ಗಾಳಿಯ ವೇಗ ಪ್ರತಿ ಗಂಟೆಗೆ ಸೊನ್ನೆಯಿಂದ ಒಂದೂವರೆ ಕಿ.ಮೀನಷ್ಟಿದೆ.  ಕೆಲವೆಡೆ 3.5 ಕಿ.ಮೀನಷ್ಟು ಗಾಳಿಯ ವೇಗ ಕಂಡುಬರುತ್ತಿದೆ. ಇದರಿಂದ ಕನಿಷ್ಠ ತಾಪಮಾನದಲ್ಲೂ ಗಣನೀಯ ಇಳಿಕೆಯಾಗಿದೆ. ಸರಾಸರಿ 15 ಡಿಗ್ರಿ ಸೆಲ್ಸಿಯಸ್‍ನಿಂದ 20 ಡಿಗ್ರಿ ಸೆಲ್ಸಿಯಸ್‍ವರೆಗೂ ಇದೆ.

ಒಳನಾಡಿನಲ್ಲಿ ಚಳಿಯ ಪ್ರಮಾಣ ಹೆಚ್ಚಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನು ಹೆಚ್ಚಿನ ಚಳಿ ಕಂಡುಬರುತ್ತಿದೆ. ಗರಿಷ್ಠ ಉಷ್ಣಾಂಶ ಸರಾಸರಿ 27 ಡಿಗ್ರಿ ಸೆಲ್ಸಿಯಸ್‍ವರೆಗೂ ಕಂಡುಬರುತ್ತಿದೆ.  ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ ಒಳನಾಡಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಬೆಳಗಿನ ಜಾವ ಮಂಜು ಕವಿಯುವುದು ವಾಡಿಕೆ. ಕೆಲವೆಡೆ ದಟ್ಟ ಮಂಜು ಕವಿಯಬಹುದು.

ಮಕರ ಸಂಕ್ರಾಂತಿ ಹಬ್ಬದವರೆಗೂ ಚಳಿಯ ಪ್ರಮಾಣ ಹೆಚ್ಚು ಕಡಿಮೆ ಹೀಗೆಯೇ ಮುಂದುವರೆಯುತ್ತದೆ. ವಾತಾವರಣದಲ್ಲಿ ಬದಲಾವಣೆಯಾದರೆ ಮಾತ್ರ ಅಲ್ಪ ಪ್ರಮಾಣದ ಮಳೆ ಬರಬಹುದು. ಸದ್ಯಕ್ಕೆ ಮಳೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.  ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಕೊಯ್ಲು ಮತ್ತು ಒಕ್ಕಣೆಯಲ್ಲಿ ರೈತರು ನಿತರಾಗಿದ್ದು, ಮಳೆಯ ಅವಶ್ಯಕತೆ ಕಂಡುಬರುವುದಿಲ್ಲ ಎಂದು ಹೇಳಿದರು.

Facebook Comments