ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.2- ಜನ ಸಾಮಾನ್ಯರ ಮೇಲೆ ಮತ್ತೊಂದು ಬರೆ ಬಿದ್ದಿದ್ದು, ವಾಣಿಜ್ಯ ಬಳಕೆಯ ಗ್ಯಾಸ್ ದರವನ್ನು ನಿನ್ನೆ 73.5 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೃಷ್ಟವಶಾತ್ ಅಡುಗೆ ಅನಿಲದ ದರ ಬದಲಾವಣೆಯಾಗಿಲ್ಲ. ಗ್ಯಾಸ್ ದರ ಪರಿಷ್ಕರಣೆಯ ವೇಳೆ ತೈಲ ಕಂಪೆನಿಗಳು ವಾಣಿಜ್ಯ ಬಳಕೆಯ ಅನಿಲದ ದರವನ್ನು ಹೆಚ್ಚಿಸಿವೆ. 19 ಕೆಜಿ ಸಿಲಿಂಡರ್ ಮೇಲೆ ಈಗಿದ್ದ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಪ್ರತಿಯೊಂದ ರಾಜ್ಯದಲ್ಲೂ ಬೇರೆ ಬೇರೆ ದರ ನಿಗದಿಯಾಗಿದೆ.

ಸಂಸತ್ ಅಧಿವೇಶನ ಆರಂಭವಾದ ದಿನದಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡದೆ ತಟಸ್ಥತೆ ಕಾಪಾಡಿಕೊಳ್ಳಲಾಗಿದೆ. ಈ ಮೊದಲು ಸರಾಸರಿ 25 ಪೈಸೆಯಂತೆ ಪ್ರತಿ ದಿನ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುತ್ತಿತ್ತು. ಕಳೆದ ಏಪ್ರಿಲ್‍ನಲ್ಲಿ ಪಂಚರಾಜ್ಯಗಳ ಚುನಾವಣೆ ವೇಳೆಯೂ ದರ ಏರಿಕೆಯನ್ನು ನಿಲ್ಲಿಸಲಾಗಿತ್ತು. ಅಂತಿಮ ಸುತ್ತಿನ ಮತದಾನ ಮುಗಿಯುತ್ತಿದ್ದಂತೆ ದರ ಏರಿಕೆ ಆರಂಭವಾಯಿತು.

ಸಂಸತ್ ಅಧಿವೇಶನ ಶುರುವಾಗುವವರೆಗೂ ನಿಯಮಿತವಾಗಿ ದರ ಹೆಚ್ಚಳವಾಗುತ್ತಲೇ ಇತ್ತು. ಅಧಿವೇಶನದಲ್ಲಿ ಪ್ರತಿಪಕ್ಷಗಳು ಪೆಗಾಸಸ್ ಬೇಹುಗಾರಿಕೆ, ಕೃಷಿ ಕಾನೂನುಗಳ ಬದಲಾವಣೆ, ಪೆಟ್ರೋಲ್, ಡಿಸೇಲ್, ಪೆಟ್ರೋಲ್ ಡಿಸೇಲ್ ಮತ್ತು ಅಗತ್ಯ ವಸ್ತುಗಳ ದರಗಳ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲ ದರ ಏರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಬದಲಾಗಿ ವಾಣಿಜ್ಯ ಬಳಕೆಯ ಗ್ಯಾಸ್ ದರ ಹೆಚ್ಚಿಸಲಾಗಿದೆ.

Facebook Comments