ಒಂದೆರಡು ದಿನಗಳಲ್ಲಿ ಉಳಿದ ಗುಂಡಿಗಳ ಮುಚ್ಚುತ್ತೇವೆ: ಆಯುಕ್ತ ಅನಿಲ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, :  ನಿಗಧಿತ ಅವಧಿಯೊಳಗೆ ನಗರದ ಶೇ.90ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಉಳಿದ ಗುಂಡಿಗಳನ್ನು ಒಂದೆರಡು ದಿನದೊಳಗೆ ಭರ್ತಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಅನಿಲ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 10,656 ಗುಂಡಿಗಳನ್ನು ಗುರುತಿಸಲಾಗಿತ್ತು. ಈ ಗುಂಡಿಗಳನ್ನು ಮುಚ್ಚಲು ನ.10ರವರೆಗೆ ಗಡುವು ನೀಡಲಾಗಿತ್ತು.

ಈ ಅವಧಿಯಲ್ಲಿ ಸುಮಾರು 9,914 ಗುಂಡಿಗಳನ್ನು ಮುಚ್ಚಲಾಗಿದ್ದು, ಉಳಿದ 742 ಗುಂಡಿಗಳನ್ನು ಒಂದೆರಡು ದಿನಗಳಲ್ಲಿ ಮುಚ್ಚಲಾಗುವುದು ಎಂದು ಅಂಕಿಅಂಶ ಸಮೇತ ವಿವರಿಸಿದರು. ಮಳೆಯಿಂದ ನಿರಂತರವಾಗಿ ಗುಂಡಿಗಳು ಬೀಳುತ್ತಲೇ ಇರುತ್ತವೆ. ಮುಚ್ಚುವ ಕಾರ್ಯವೂ ಸಹ ನಿರಂತರವಾಗಿ ನಡೆಯುತ್ತಲೆ ಇರುತ್ತದೆ. ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚದ ನಾಲ್ಕು ಇಂಜಿನಿಯರ್‍ಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಯಾವುದೇ ಗುತ್ತಿಗೆದಾರರಿಗೆ ದಂಡ ಹಾಕಿಲ್ಲ. ಮುಂದೆ ರಸ್ತೆಗುಂಡಿ ಮುಚ್ಚುವ ಜವಾಬ್ದಾರಿಯನ್ನು ಗುತ್ತಿಗೆದಾ ರರೇ ನಿರ್ವಹಿಸಬೇಕು. ನಿರ್ಲಕ್ಷ್ಯವಹಿಸಿದರೆ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಟ್ಟುನಿಟ್ಟಿನ ಜಾರಿ ಅಗತ್ಯ: ನಗರದಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಮನಸೋ ಇಚ್ಚೆ ಕಟ್ಟಡಗಳನ್ನು ಕಟ್ಟಲಾಗುತ್ತಿದ್ದು, ಇದರ ಪರಿಣಾಮವೇ ಕಟ್ಟಡ ಕುಸಿತಕ್ಕೆ ಕಾರಣವಾಗುತ್ತಿದೆ. ಈ ಅಕ್ರಮಗಳನ್ನು ತಡೆಯಲು ಸಮರ್ಪಕವಾದ ಕಾಯ್ದೆ ಯೋಜನೆ ಜಾರಿ ಇಲ್ಲದಿರುವುದೇ ಕಟ್ಟಡಗಳ ದುರಂತಕ್ಕೆ ಕಾರಣವಾಗಿದೆ.  ಅಕ್ರಮ ಕಟ್ಟಡಗಳ ನಿರ್ಮಾಣ ತಡೆಗೆ ಒಂದೇ ಒಂದು ಸ್ಕ್ವಾಡ್ ಮಾತ್ರ ಇದ್ದು ಇವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಪ್ರಹರಿ ವಾಹನಗಳ ಸಂಖ್ಯೆಯ ಹೆಚ್ಚಳಕ್ಕೆ ಕ್ರಮ ಕೈಗೊಂಡು ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.

ಸುಬ್ರಹ್ಮಣ್ಯ ನಗರದಲ್ಲಿ ಬಿಲ್ಡಿಂಗ್ ಬಿರುಕು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆಯುಕ್ತರು ಈ ಪ್ರಕರಣದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರದೇ ತಪ್ಪಿದೆ. ಸ್ವಲ್ಪ ಜಾಗ ಬಿಟ್ಟು ಮನೆ ನಿರ್ಮಾಣ ಮಾಡಬೇಕಿತ್ತು. ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಮನೆ ನಿರ್ಮಾಣಕ್ಕೆ ಮುಂದಾಗದಿರುವುದೇ ಈ ಬಿರುಕಿಗೆ ಕಾರಣವಾಗಿದೆ.

ಮನೆ ವಾಲಿರುವವರದ್ದು ತಪ್ಪೇನಿಲ್ಲ. ಹೀಗಾಗಿ ಹೊಸದಾಗಿ ಮನೆ ನಿರ್ಮಿಸುತ್ತಿರುವವರಿಗೆ ನೋಟಿಸ್ ನೀಡಲಾಗುವುದು. ಈ ಕುರಿತು ವರದಿ ನೀಡಲು ಸೂಚಿಸಲಾಗಿದೆ ಎಂದರು.ವಾಲಿದ ಕಟ್ಟಡ ಎಷ್ಟರಮಟ್ಟಿಗೆ ಹಾನಿಗೊಳಗಾಗಿದೆ ಎಂಬುದರ ಬಗ್ಗೆ ಸಂಸ್ಥೆಯೊಂದು ಪರೀಕ್ಷಿಸಿದ್ದು, ಮತ್ತೊಂದು ಬಾರಿ ಸಿವಿಕ್ ಎಡ್ ಸಂಸ್ಥೆಯಿಂದ ಪರಿಶೀಲಿಸಿ ಮನೆಯನ್ನು ಕೆಡವಬೇಕೆ? ಬೇರೆ ಮಾರ್ಗಗಳು ಏನು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ 175 ಶಿಥಿಲ ಕಟ್ಟಡಗಳನ್ನು ಗುರುತಿಸಲಾಗಿದೆ ಕೆಲ ಕಟ್ಟಡ ಮಾಲೀಕರು ರೂಪುರೇಷೆ ಪಾಲಿಸದೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸ್ವಲ್ಪ ಶಿಥಿಲವಾಗಿರುವ ದುರಸ್ತಿ ಮಾಡುವಂತಹ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ದುರಸ್ತಿಗೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುವುದು. ಇನ್ನೂ ನವೀಕರಿಸಲಾಗದಂತಹ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ ನೆಲಸಮ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಶೇಷ ಆಯುಕ್ತರ ವರ್ಗಾವಣೆ ಇಲ್ಲ:
ಕಳೆದ ಪಾಲಿಕೆ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಸದಸ್ಯರ ಮಾತಿಗೆ ಮನ್ನಣೆ ನೀಡದ ಪಶ್ಚಿಮ ವಲಯದ ವಿಶೇಷ ಆಯುಕ್ತ ಅನುಬ್‍ಕುಮಾರ್ ಅವರನ್ನು ವರ್ಗಾವಣೆ ಮಾಡುವಂತೆ ಪಟ್ಟು ಹಿಡಿದಿದ್ದರು. ಈಗಾಗಲೇ ವಿಶೇಷ ಆಯುಕ್ತರನ್ನು ವರ್ಗಾವಣೆ ಮಾಡುವುದಾಗಿ ಅನಿಲ್‍ಕುಮಾರ್ ಭರವಸೆ ನೀಡಿದರು. ಆದರೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಆಯುಕ್ತರು ಉತ್ತಮವಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವರ್ಗಾವಣೆ ಕುರಿತು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು. ವರ್ಗಾವಣೆ ಮಾಡುವುದಿಲ್ಲ ಎಂದರು.

Facebook Comments