ಸಾಲಬಾಧೆ : ಕಪಿಲಾನದಿಗೆ ತಾಯಿ-ಮಗಳು ಆತ್ಮಹತ್ಯೆ, ಮೊಮ್ಮಗು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು,ಅ.20-ಸಾಲಬಾಧೆಯಿಂದ ನೊಂದು ಮಗಳು ಹಾಗೂ ಮೊಮ್ಮಗಳೊಂದಿಗೆ ಕಪಿಲಾನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತಾಯಿ-ಮಗಳು ಮೃತಪಟ್ಟಿದ್ದರೆ, ಸದ್ಯ 9 ವರ್ಷದ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮೈಸೂರಿನ ಜೆಎಸ್‍ಎಸ್ ಲೇಔಟ್ ನಿವಾಸಿ ಗಿರೀಶ್ ಎಂಬುವರ ಪತ್ನಿ ರಶ್ಮಿ(35) ಮತ್ತು ಇವರ ತಾಯಿ ಅಂಕಮ್ಮ(65) ಮೃತಪಟ್ಟವರು. 9 ವರ್ಷದ ಮೊಮ್ಮಗಳು ಮಿಂಚು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಎಂಡಿಸಿಸಿ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದ ರಶ್ಮಿ ಸಾಲಬಾಧೆಯಿಂದ ನೊಂದಿದ್ದರು. ಇವರ ತಾಯಿ ಅಂಕಮ್ಮ ಸಾಲ ತೀರಿಸಲು ಪರದಾಡುತ್ತಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗದೆ ನೊಂದ ಅಂಕಮ್ಮ ಮಗಳು ರಶ್ಮಿ ಮತ್ತು ಮೊಮ್ಮಗಳು ಮಿಂಚು ಜೊತೆ ನಿನ್ನೆ ಮಧ್ಯಾಹ್ನ ಮಲ್ಲನಮೂಲೆ ಮಠದ ಹಿಂಭಾಗದಲ್ಲಿ ಕಪಿಲಾನದಿಗೆ ಹಾರಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳೀಯರು ನದಿಗೆ ಹಾರಿ ಈ ಮೂವರನ್ನು ರಕ್ಷಿಸಲು ಮುಂದಾದರಾದರೂ ಅಂಕಮ್ಮ ಮೃತಪಟ್ಟಿದ್ದಾರೆ.  ರಶ್ಮಿ ಮತ್ತು ಮಿಂಚು ಅವರನ್ನು ಈಜಿ ದಡ ಸೇರಿಸಿದರಾದರೂ ರಶ್ಮಿ ಬದುಕುಳಿಯಲಿಲ್ಲ. ಮಿಂಚು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ರಶ್ಮಿ ಅವರ ಪತಿ ಗಂಗಾಧರ್ ಪಾಂಡವಪುರ ಮೂಲದವರಾಗಿದ್ದು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದ್ದಾರೆ.  ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‍ಐ ಪುನೀತ್ ಹಾಗೂ ಕವೀಶ್ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments